ಪ್ರಧಾನಿ ನರೇಂದ್ರ ಮೋದಿ-ಯೋಗಿ ಭೇಟಿ ಕುತೂಹಲ


ನವದೆಹಲಿ, ಜೂ.೧೧- ಉತ್ತರಪ್ರದೇಶದಲ್ಲಿ ಕೋವಿಡ್ ಸೋಂಕು ನಿರ್ವಹಣೆ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಫಲರಾಗಿದ್ದಾರೆ ಎನ್ನುವ ಬಿಜೆಪಿ ಪಕ್ಷದ ಶಾಸಕರ ಆರೋಪದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೋಗಿ ಆದಿತ್ಯನಾಥ್ ಇಂದು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಇದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಣ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದ್ದಂತೆ ಪ್ರಧಾನಿ ಅವರು ಯೋಗಿ ಆದಿತ್ಯನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು ಇಬ್ಬರ ನಾಯಕರ ಮುನಿಸಿಗೂ ಕಾರಣವಾಗಿತ್ತು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಎದುರಿಸಬೇಕಾದರೆ ಯೋಗಿ ಆದಿತ್ಯನಾಥ್ ತಮ್ಮ ಕಾರ್ಯ ವೈಖರಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಅನೇಕ ಶಾಸಕರು ಅವರ ವಿರುದ್ಧ ತಿರುಗಿಬಿದ್ದಿದ್ದರು ಅಲ್ಲದೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸಚಿವ ಸಂಪುಟವನ್ನು ಪುನಾರಚಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿರುವುದು ಯೋಗಿ ಆದಿತ್ಯನಾಥ್ ಪಿತ್ತ ನೆತ್ತಿಗೇರಿತು.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಲ್ಲಿ ಎರಡು ದಿನಗಳ ದೆಹಲಿಗೆ ಭೇಟಿ ನೀಡಿರುವ ಯೋಗಿ ಆದಿತ್ಯನಾಥ್ ನೆನ್ನೆ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು .
ಇದೀಗ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ .ಈ ಮೂಲಕ ಇಬ್ಬರಲ್ಲಿ ಮೂಡಿರುವ ಮುನಿಸಿಗೆ ತೇಪೆ ಹಾಕುವ ಕೆಲಸ ಮಾಡಿದ್ದಾರೆ.
ದೆಹಲಿಗೆ ತೆರಳುವುದಕ್ಕೆ ಮನ್ನಾ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿ ಸುನೀಲ್ ಬನ್ಸಾಲ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಘಟಕ , ಪಕ್ಷದ ಸಂಘಟನೆ ಮತ್ತು ಸುಸೂತ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ದಿನನಿತ್ಯ ನಡೆಯುವ ಭೇಟಿ ಇದಾಗಿದೆ ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದೆ.
ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಅಲ್ಲದೆ ಕೊರೊನಾ ಸೋಂಕಿನಿಂದ ಮೃತಪಟ್ಟ ಜನರನ್ನು ಸರಿಯಾದ ರೀತಿಯಲ್ಲಿ ಅಂತ್ಯಸಂಸ್ಕಾರ ಮಾಡದೆ ಅವುಗಳನ್ನು ಗಂಗಾನದಿಯಲ್ಲಿ ಎಸೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಜನರನ್ನು ಕೆರಳಿಸುವಂತೆ ಮಾಡಿದೆ.
ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜನರು ಬಿಜೆಪಿ ವಿರುದ್ಧ ತಿರುಗಿ ಬೀಳುವ ಲಕ್ಷಣಗಳು ಸ್ಪಷ್ಟವಾಗಿದೆ ಹಿನ್ನಲೆಯಲ್ಲಿ ಜನರನ್ನು ಒಲಿಸಿಕೊಳ್ಳಲು ಮತ್ತು ಪಕ್ಷದಲ್ಲಿ ಕೆಲ ಬದಲಾವಣೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ