ಪ್ರಧಾನಿ ಜನ್ಮದಿನ 15 ದಿನ ಆರೋಗ್ಯ ರಕ್ಷಣೆಯ ವಿಶೇಷ ಅಭಿಯಾನ: ಡಾ.ಕೆ.ಸುಧಾಕರ್‌

ಬೆಂಗಳೂರು, ಸೆ. 16- ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ, ನಾಳೆಯಿಂದ ಮಹಾತ್ಮ ಗಾಂಧಿ ಜಯಂತಿವರೆಗೆ ರಾಜ್ಯದಲ್ಲಿ 15 ದಿನ ಆರೋಗ್ಯ ರಕ್ಷಣೆಯ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಸೇರಿದಂತೆ ವಿಶೇಷ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಇಲ್ಲ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ರಾಜ್ಯದಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಂದಾಗಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಮಧುಮೇಹ, ಬಿಪಿ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಎಷ್ಟು ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ನಿರಂತರವಾಗಿ ಈ ಕಾರ್ಯ ನಡೆಯಬೇಕಿದೆ. ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತಿಳಿಸಿ, ಗುರಿ ನಿಗದಿ ಮಾಡಿ ಜನರನ್ನು ಉಪಕೇಂದ್ರಕ್ಕೆ ಕರೆದುಕೊಂಡು ಬರಲು ಸೂಚಿಸಬೇಕು. ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಪ್ರಮಾಣ ಶೇ.20 ರಷ್ಟು ಮಾತ್ರ ಆಗಿದೆ. ಈ ಹದಿನೈದು ದಿನಗಳಲ್ಲಿ ಲಸಿಕಾಕರಣವು ದೊಡ್ಡ ಮಟ್ಟದಲ್ಲಿ ನಡೆಯಲು ಕ್ರಮ ವಹಿಸಬೇಕು. ಎನ್‌ಜಿಒಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳನ್ನು ಆಹ್ವಾನಿಸಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಬೇಕು ಎಂದು ಸೂಚಿಸಿದರು.

ನವಜಾತ ಶಿಶುವಿನಿಂದ ಆರಂಭವಾಗಿ, ವಯೋವೃದ್ಧರವೆಗೂ ಸರ್ಕಾರ ನೀಡಿರುವ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಚಿಕಿತ್ಸೆ, ತಪಾಸಣೆಯ ಸೌಲಭ್ಯಗಳ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ. ಅಂತಹವರಿಗೆ ಜಾಗೃತಿ ಮೂಡಿಸಿ ತಪಾಸಣೆ ಮಾಡಿಸಿಕೊಳ್ಳಲು ಹೇಳಬೇಕು ಎಂದರು

ರಾಜ್ಯದಲ್ಲಿ ಕ್ಯಾನ್ಸರ್‌ ತಪಾಸಣೆಯನ್ನು ಕೂಡ ಮಾಡಬೇಕು. ಜಿಲ್ಲಾ ಮಟ್ಟ ಅಥವಾ ತಾಲೂಕು ಮಟ್ಟದಲ್ಲಿ ತಪಾಸಣೆ ವ್ಯವಸ್ಥೆ ಮಾಡಿ, ಜನರೇ ಮುಂದೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು.ಹಾಗೆಯೇ, 35 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ಪುರುಷರನ್ನು ಕರೆದುಕೊಂಡು ಬಂದು ತಪಾಸಣೆ ಮಾಡಿಸಬೇಕು. ಐದು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ನಡೆಯಬೇಕು. ಹೀಗೆ ತಪಾಸಣೆ ಮಾಡಿದರೆ ಸಾವುಗಳನ್ನು ತಪ್ಪಿಸಬಹುದು. ಜೊತೆಗೆ 8, 9, 10 ನೇ ವರ್ಷ ವಯಸ್ಸಿನ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.

ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೇಳಿ ಜನರನ್ನು ಕರೆಸಿ ಅವರ ಆರೋಗ್ಯ ತಪಾಸಣೆ ಮಾಡಿಸಬಹುದು. ಹಾಗೆಯೇ ಎನ್‌ಜಿಒಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಜನರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

1 ಕೋಟಿ ಆಯುಷ್ಮಾನ್‌
ಕಾರ್ಡ್‌ ವಿತರಣೆಯ ಗುರಿ:

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು 35 ಲಕ್ಷ ಜನರಿಗೆ ನೀಡಲಾಗಿದೆ. ಇನ್ನೂ 65 ಲಕ್ಷದಷ್ಟು ಕಾರ್ಡ್‌ಗಳನ್ನು ನೀಡಿ 1 ಕೋಟಿಯ ಗುರಿಯನ್ನು ತಲುಪಬೇಕು. ದೇಶದಲ್ಲಿ ಕರ್ನಾಟಕವೇ 1 ಕೋಟಿಯ ಗುರಿ ಮೊದಲು ತಲುಪಬೇಕು ಎಂದು ಅವರು ಹೇಳಿದ್ದಾರೆ.

ಪ್ರತಿ ದಿನ ಮಾಡುವ ಕೆಲಸಗಳೇ ಆರೋಗ್ಯ ರಕ್ಷಣೆಗೆ ಸಾಕು ಎಂಬ ತಪ್ಪು ಭಾವನೆ ಜನರಲ್ಲಿದೆ. ಆದ್ದರಿಂದ ಯೋಗ, ಧ್ಯಾನ, ಪ್ರಾಣಾಯಾಮದ ಬಗ್ಗೆಯೂ ಈ ಅಭಿಯಾನದಲ್ಲಿ ಒತ್ತು ನೀಡಬೇಕು. ಇದಕ್ಕಾಗಿ ಯೋಗ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳ ಸಹಕಾರ ಪಡೆಯಬಹುದು. ಮಾತೃ ಮರಣ, ಶಿಶು ಮರಣ ಇಳಿಕೆಗೂ ಈ ಅಭಿಯಾನದಲ್ಲಿ ಗಮನಹರಿಸಬೇಕು ಎಂದು ಹೇಳಿದ್ದಾರೆ.