ಪ್ರಧಾನಿ ಜನ್ಮದಿನದ ಪ್ರಯುಕ್ತ ಇಂದಿನಿಂದ ಬಿಜೆಪಿ ಸೇವಾ ಪಾಕ್ಷಿಕ

ಕುಣಿಗಲ್, ಸೆ. ೧೭- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಪಕ್ಷವು ಸೆ. ೧೭ ರಿಂದ ಅಕ್ಟೋಬರ್ ೨ ರವರೆಗೆ ಸೇವಾ ಪಾಕ್ಷಿಕ ಎಂಬ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಕೆ.ಎಸ್. ಬಲರಾಮ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಎಂಟು ವರ್ಷ ದೇಶದ ಪ್ರಧಾನಮಂತ್ರಿಯಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ೨೦ ವರ್ಷಗಳ ಕಾಲ ಆಡಳಿತವನ್ನು ಸ್ವಚ್ಛ ಪಾರದರ್ಶಕ ಭ್ರಷ್ಟಾಚಾರ ರಹಿತವಾಗಿ ನಡೆಸಿದ್ದಾರೆ. ಇಂತಹ ದಿಟ್ಟ ಪ್ರಧಾನ ಮಂತ್ರಿಗಳ ಹುಟ್ಟುಹಬ್ಬವನ್ನು ದೇಶಾದ್ಯಂತ ಬಿಜೆಪಿ ಪಕ್ಷವು ಸೇವಾ ಪಾಕ್ಷಿಕ ಎಂಬ ವಿನೂತನ ಕಾರ್ಯಕ್ರಮವನ್ನು ಹದಿನೈದು ದಿನಗಳ ಕಾಲ ಗ್ರಾಮ ಪಂಚಾಯಿತಿ, ಬೂತ್ ಮಟ್ಟ, ಹೋಬಳಿ ಮಟ್ಟಗಳಲ್ಲಿ ರಕ್ತದಾನ ಶಿಬಿರ, ಜೀವ ರಕ್ಷಕ ಲಸಿಕೆ ಅಭಿಯಾನ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನ ಕುರಿತು ಪ್ರದರ್ಶನ ವಿಚಾರ ಸಂಕಿರಣ, ಆರೋಗ್ಯ ತಪಾಸಣಾ ಶಿಬಿರ, ಅರಳಿ ಸಸಿ ನೆಡುವ ಅಭಿಯಾನ, ಕಮಲೋತ್ಸವ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ, ಪ್ರಧಾನ ಮಂತ್ರಿಗಳ ಮನ್ಕಿಬಾತ್ ಕಾರ್ಯಕ್ರಮ ವೀಕ್ಷಣೆ, ವಿವಿಧ ಫಲಾನುಭವಿಗಳ ನೋಂದಾವಣೆ ಅಭಿಯಾನ, ಫಲಾನುಭವಿಗಳ ಸಭೆ, ಅಮೃತ ಸರೋವರ, ಅಂಗನವಾಡಿ ಸೇವಾ ದಿವಸ, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಸೆ. ೩೦ ರಂದು ಕ್ಷಯ ರೋಗ ನಿರ್ಮೂಲನ ಅಭಿಯಾನ. ಸೇರಿದಂತೆ ಅಕ್ಟೋಬರ್ ೨ ರಂದು ಸ್ವಚ್ಛತಾ ಅಭಿಯಾನ ಮತ್ತು ಖಾದಿ ಉತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಗುವುದು. ಪಕ್ಷದ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ದಾ ರವರ ಹಾಗೂ ಮುಖಂಡರಾದ ಡಿ ಕೃಷ್ಣಕುಮಾರ್ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಈ ಸೇವಾ ಪಾಕ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್. ಸದಾಶಿವಯ್ಯ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಕಣ್ಣ, ದೇವರಾಜ್, ಮನೋಹರ್, ರಾಕೇಶ್, ಒಬಿಸಿ ಅಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.