ಪ್ರಧಾನಿ, ಉಪರಾಷ್ಟ್ರಪತಿ ಅಧಿಕೃತ ನಿವಾಸ 2022ಕ್ಕೆ ಪೂರ್ಣ

ನವದೆಹಲಿ, ಮೇ.೩- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿರ್ಮಾಣ ಮಾಡುತ್ತಿರುವ ಉಪರಾಷ್ಟ್ರಪತಿ ಮತ್ತು ಪ್ರಧಾನಿ ಅವರ ಅಧಿಕೃತ ನಿವಾಸ ೨೦೨೨ಕ್ಕೆ ಪೂರ್ಣಗೊಳ್ಳಲಿದೆ.
೨೦ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸೆಂಟ್ರಲ್ ವಿಸ್ತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದರ ಅಡಿ ಉಪರಾಷ್ಟ್ರಪತಿ ಪ್ರಧಾನಮಂತ್ರಿ ಅವರ ನಿವಾಸ ಪ್ರಧಾನಮಂತ್ರಿಗಳ ಕಾರ್ಯಾಲಯ ಸೇರಿದಂತೆ ಹೊಸ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗುತ್ತದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ೨೦,೦೦೦ ಕೋಟಿ ಮೊತ್ತದ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ ಇದರ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯೋಜನೆಗೆ ಹಸಿರು ನಿಶಾನೆ ನೀಡಿದ್ದಾರೆ.
ಹೊಸದಾಗಿ ನಿರ್ಮಾಣ ಮಾಡಲಿರುವ ಸಂಸತ್ ಭವನದಲ್ಲಿ ಎಲ್ಲ ಸಚಿವಾಲಯಗಳಿಗೆ ಒಂದೇ ಕಡೆ ಕಚೇರಿ ಪ್ರಧಾನಮಂತ್ರಿಗಳ ವಿಶೇಷ ಭದ್ರತೆ ಒದಗಿಸುವ ಎಸ್ ಪಿಜಿಗೆ ಕೂಡ ಇಲ್ಲೇ ಕಚೇರಿ ತೆರೆಯಲು ಕೂಡ ನಿರ್ಧರಿಸಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ ೨೦೨೨ರ ನವೆಂಬರ್ ವೇಳೆಗೆ ಹೊಸ ಸಂಸದ್ ಭವನ ಸಂಪೂರ್ಣವ ಪೂರ್ಣಗೊಳ್ಳಲಿದೆ.
೨೦೨೨ರ ವೇಳೆಗೆ ಉಪರಾಷ್ಟ್ರಪತಿಗಳ ನಿವಾಸ, ೨೦೨೨ರ ಡಿಸೆಂಬರ್ ವೇಳೆಗೆ ಪ್ರಧಾನಿ ಅವರ ನಿವಾಸ ಮತ್ತು ಪ್ರಧಾನಿ ಅವರ ವಿಶೇಷ ಭದ್ರತಾ ಪಡೆಯ ಕಾರ್ಯಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಕಛೇರಿಗಳು ಒಂದೇಕಡೆ ಇರುವಂತೆ ನಿರ್ಮಾಣ ಮಾಡಲಾಗುತ್ತಿದ್ದು ಇದಕ್ಕಾಗಿ ೧೩೪೫೦ ಕೋಟಿ ರೂಪಾಯಿ ವೆಚ್ಚವಾಗುತ್ತದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸರಿ ಸುಮಾರು ೭೦ ಸಾವಿರ ಉದ್ಯೋಗಿಗಳು ದೆಹಲಿಯ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಲಾಗಿರುವ ೩೦ ಬೃಹತ್ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇದೀಗ ಅವರನ್ನೆಲ್ಲಾ ಒಂದೇ ಕಡೆ ತರುವ ಉದ್ದೇಶವನ್ನು ಹೊಂದಲಾಗಿದೆ.