ಪ್ರಧಾನಿಯಿಂದ ಹಕ್ಕು ಪತ್ರ ಪಡೆದವರ ಸಂತಸದ ನುಡಿಗಳು

ಕಲಬುರಗಿ,ಜ.19: ಮಳಖೇಡ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೆಂದ್ರ ಮೋದಿ ಅವರಿಂದ ಸಾಂಕೇತಿಕವಾಗಿ ಹಕ್ಕು ಪತ್ರ ಪಡೆದ ಕಲಬುರಗಿ ಜಿಲ್ಲೆಯ 5 ಜನ ಫಲಾನುಭವಿಗಳು ಪತ್ರಕರ್ತರೊಂದಿಗೆ ಮಾತನಾಡುತ್ತಾ, ತಮ್ಮ ಸಂತಸವನ್ನು ಹಂಚಿಕೊಂಡರು.
ಪತಿ ದೇವಲಾ ಚೋಕಲಾ ಜಾಧವ ಅವರೊಂದಿಗೆ ಪ್ರಧಾನಿಗಳಿಂದ ಹಕ್ಕು ಪತ್ರ ಪಡೆದ ಸೇಡಂ ತಾಲೂಕಿನ ಉಡಗಿ ತಾಂಡಾದ ರತ್ನಾಬಾಯಿ ಜಾಧವ ಅವರು ಮೋದಿ ಅವರೊಂದಿಗೆ ಕುಶಲೋಪರಿ ಮಾತಾಡಿದ್ದು ಸಂತಸ ಉಂಟು ಮಾಡಿದೆ. ತಮಗೆ ಹಕ್ಕು ಪತ್ರ ನೀಡಿದಕ್ಕೆ ಸಂತಸದಿಂದ ಅವರನ್ನು ಆಶೀರ್ವದಿಸಿದೆ. ಇಂತಹ ಸೌಭಾಗ್ಯ ನನಗೆ ದೊರೆತಿದ್ದು ಪುಣ್ಯ ಎಂದು ನಗು ಮೂಖದಿಂದಲೆ ನುಡಿದರು.
ಚಿಂಚೋಳಿ ತಾಲೂಕಿನ ಖಾನಾಪೂರ ಗ್ರಾಮ ಪಂಚಾಯತಿಯ ಡೊಂಗ್ರು ನಾಯಕ್ ತಾಂಡಾದ ಈಶ್ವರ ನಾಯಕ ಪತ್ನಿ ಮಾತನಾಡಿ, ತುಂಬಾ ಸಂತೋಷದಿಂದ ಹಕ್ಕು ಪತ್ರ ಪಡೆದಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವೆ ಎಂದರು.
ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿರುವ ಭುಯ್ಯಾರ(ಕೆ) ಪಂಚಾಯತಿಯ ಫತ್ತು ನಾಯಕ್ ನಗರ ತಾಂಡಾದ ಇಮ್ಲಾಬಾಯಿ ಬನ್ಸಿಲಾಲ್ ಮಾತನಾಡಿ, ಈ ಹಿಂದೆ ಜಮೀನಿನ ಹಕ್ಕು ಇರಲಿಲ್ಲ. ಈಗ ಸರ್ಕಾರದವರು ನಮಗೆ ಹಕ್ಕು ಕೊಟ್ಟಿದ್ದಾರೆ. ಬಂಜಾರಾ ಸಮುದಾಯಕ್ಕೆ ತುಂಬಾ ಅನುಕೂಲವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಮಲಾಪೂರ ತಾಲೂಕಿನ ಅಡಕಿ ಮೋಕ ನಗರ ತಾಂಡಾದ ನೂರು ವಿಠ್ಠಲ್ ರಾಠೋಡ ಮತ್ತು ಚಾಂದಿಬಾಯಿ ದಂಪತಿ ಅವರು ಹಕ್ಕು ಪತ್ರ ನೀಡಿದಕ್ಕೆ ಮೋದಿ, ಬೊಮ್ಮಾಯಿ ಸರ್ಕಾರಕ್ಕೆ ತಮ್ಮ ಅಭಿನಂದನೆ ಸಲ್ಲಿಸಿದರು.
ಸೂರಿನ ಅಧಿಕಾರ ಸಿಕ್ತು: ಹಕ್ಕು ಪತ್ರ ಪಡೆದ ಖುಷಿಯಲ್ಲಿ ಮುಗುಳ್ನಗೆಯಿಂದಲೆ ಪತ್ರಕರ್ತರೊಂದಿಗೆ ಮಾತಿಗಿಳಿದ ಚಿಂಚೋಳಿ ತಾಲೂಕಿನ ಧರ್ಮಾಪುರ ಗ್ರಾಮದ ಮೋತಿಮೋಕ್ ತಾಂಡಾದ ನಿವಾಸಿ ಪಾರ್ವತಿವಾಯಿ ತುಕಾರಾಮ ಮಾತನಾಡಿ, ಹಕ್ಕು ಪತ್ರ ಪಡೆದಿದ್ದು, ಸೂರಿನ ಅಧಿಕಾರ ಸಿಕ್ಕಂತಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐದು ಜನರಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸಿದ ನಂತರ ಬಟನ್ ಪ್ರೆಸ್ ಮಾಡುವ ಮೂಲಕ ಉಳಿದೆಲ್ಲರಿಗೂ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂದಿಯಿಂದ ಸ್ಥಳದಲ್ಲಿಯೇ ಹಕ್ಕು ಪತ್ರ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು. ಹಕ್ಕು ಪತ್ರ ಪಡೆದ ಫಲಾನುಭವಿಗಳನ್ನು ಪ್ರಧಾನಮಂತ್ರಿಗಳಿಗೆ ತಮ್ಮ ಸೂರಿನ ಹಕ್ಕನ್ನು ಪ್ರದರ್ಶಿಸಿದರು.