ಪ್ರಧಾನಿಮೋದಿ ಸ್ವಾಗತಕ್ಕೆ ಬೃಹತ್ ಬೈಕ್‍ರ್ಯಾಲಿ

ಕಲಬುರಗಿ, ಜ 17: ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸೇಡಂ ತಾಲೂಕಿನ ಐತಿಹಾಸಿಕ ಮಳಖೇಡ ಗ್ರಾಮಕ್ಕೆ ಜ 19 ರಂದು ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕಲಬುರಗಿ ಗ್ರಾಮೀಣ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಗ್ರಾಮೀಣ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ತೆಗನೂರು ಅವರು ತಿಳಿಸಿದ್ದಾರೆ.
ಸುಮಾರು 50,000 ಬೈಕ್‍ಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಯುವ ಮೋರ್ಚಾ ಕಾರ್ಯಕರ್ತರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಮಳಖೇಡ ಗ್ರಾಮದಲ್ಲಿ ಅಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿಗಳು, ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಾಮಿತ್ವ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಲಿದ್ದು, ಏಕಕಾಲದಲ್ಲೇ ಕಲಬುರಗಿ ಸೇರಿದಂತೆ ರಾಯಚೂರು, ಬೀದರ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ ಎಂದು ಪ್ರವೀಣ್ ತೆಗನೂರು ಅವರು ತಿಳಿಸಿದ್ದಾರೆ.