ಪ್ರಧಾನಿಗಾಗಿ ನಟ ಜಗ್ಗೇಶ್ ವಿರೂಪಾಕ್ಷೆಶ್ವರನಿಗೆ ವಿಶೇಷ ಪೂಜೆ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.20 : ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಸೋಮವಾರ ಹಂಪಿಯ ಯಂತ್ರೋದ್ಧಾರಕ, ವಿರೂಪಾಕ್ಷ, ಭುವನೇಶ್ವರಿ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
‘ದೇಶಕ್ಕೆ ಸುಭಿಕ್ಷವಾಗಲಿ, ಬರಗಾಲ ದೂರವಾಗಲಿ, ಮೋದಿಗೆ ದೇಶಾಭಿಷೇಕವಾಗಲಿ‘ ಎಂದು ಜಗ್ಗೇಶ್‌ ಅವರು ಎಲ್ಲಾ  ದೇವಸ್ಥಾನಗಳಲ್ಲಿ ಸಂಕಲ್ಪ ಮಾಡಿಸಿ ಪೂಜೆ ನೆರವೇರಿಸಿದರು.
ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನದಲ್ಲಿ ವಾಯುಸ್ತುತಿ ಪುನಶ್ಚರಣ ಸೇವೆ ಮಾಡಿಸಿದ ಅವರು, ಕೋದಂಡರಾಮ ದೇವಸ್ಥಾನಕ್ಕೂ ಹೋದರು. ವಿರೂಪಾಕ್ಷ ದೇವಸ್ಥಾನದಲ್ಲಿ ವಿರೂಪಾಕ್ಷನಿಗೆ, ಭುವನೇಶ್ವರಿಗೆ ಹಾಗೂ ಪಂಪಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಕನ್ನಡಾಂಬೆ ಭುವನೇಶ್ವರಿಯನ್ನು ಕಂಡು ಮಹದಾನಂದವಾಯಿತು ಎಂದು ಉದ್ಘರಿಸಿದರು. ಪಟ್ಟದ ಆನೆ ಲಕ್ಷ್ಮಿಗೆ ಹಣ್ಣು ತಿನ್ನಿಸಿದರು.
ಬಳಿಕ ಚಕ್ರತೀರ್ಥ ಮೂಲಕ ತೆಪ್ಪದಲ್ಲಿ ನವಬೃಂದಾವನಕ್ಕೆ ತೆರಳಿ ಮೋದಿಗಾಗಿ ಪ್ರಾರ್ಥನೆ ಸಲ್ಲಿಸಿದರು.
‘ನಾನು ಇದುವರೆಗೆ ಗೋಪ್ಯವಾಗಿ ಇಲ್ಲಿಗೆ ಬಂದು ಹೋಗುತ್ತಿದ್ದೆ. ನಿನ್ನೆ ನನ್ನ ಜನ್ಮದಿನವನ್ನು ಮಂತ್ರಾಲಯದ ರಾಯರ ಮಠದಲ್ಲಿ ಆಚರಿಸಿಕೊಂಡೆ. ಕ್ಷಾತ್ರ ತೇಜಸ್ಸಿನ ಕ್ಷೇತ್ರವಾಗಿರುವ ಹಂಪಿಯಲ್ಲಿ ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಅವಕಾಶ ಒದಗಿದ್ದರಿಂದ ಖುಷಿಯಾಗಿದೆ. ಅವರ ಸಲುವಾಗಿಯೇ ಈ ಬಾರಿ ಬಹಿರಂಗವಾಗಿ ಕಾಣಿಸಿಕೊಂಡು ದೇವರ ಸೇವೆ ಮಾಡಿಸಿರುವೆ’ ಎಂದು ಅವರು ಬಳಿಕ ಮಾಧ್ಯಮದವರಿಗೆ ತಿಳಿಸಿದರು.