ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ

ವಿಜಯಪುರ ನ. 5: ಕೇಂದ್ರ ಸರ್ಕಾರದಿಂದ ಬೀದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯ ಯೋಜನೆಯನ್ನು ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಈ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲೆಯ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿಗಳ ನಗರ ಪ್ರದೇಶದಲ್ಲಿ ಬೀದಿ ವ್ಯಾಪಾರ ಮಾಡುತ್ತಿರುವವರು ಈ ಯೋಜನೆ ಅರ್ಹರಾಗಿರುತ್ತಾರೆ. ಬೀದಿ ವ್ಯಾಪಾರದ ಗುರುತಿನ ಚೀಟಿ ಇಲ್ಲದವರು ನಗರ ಸ್ಥಳೀಯ ಸಂಸ್ಥೆಗಳಿಂದ ಶಿಫಾರಸ್ಸು ಪತ್ರ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಹೆಸರಿನಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಕಿರು ಸಾಲ ಯೋಜನೆ ಜಾರಿಗೆ ತಂದಿದ್ದು, ಅದರ ಪ್ರಕಾರ 10,000 ರೂ.ಗಳ ಕಿರು ಸಾಲ ನೀಡಲಾಗುವುದು. ಹಾಗೂ ಅದನ್ನು ಹನ್ನೆರೆಡು ಮಾಸಿಕ ಕಂತುಗಳಲ್ಲಿ ಬಡ್ಡಿರಹಿತವಾಗಿ ಮರುಪಾವತಿಸಬೇಕಾಗಿರುತ್ತದೆ. ನಿಯಮಿತ ಮರುಪಾವತಿಗೆ ಪ್ರೋತ್ಸಾಹಿಸುವುದು ಎಂದು ಅವರು ತಿಳಿಸಿದರು.

ಅದರಂತೆ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 4098 ಬೀದಿ ವ್ಯಾಪಾರಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ನಗರ ಪಟ್ಟಣ ಪ್ರದೇಶದ ಒಟ್ಟು ಜನಸಂಖ್ಯೆಯ ಶೇ 1 ರಷ್ಟು ಅಚಿದರೆ 6129 ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯ ಫಲಾನುಭವಿಗಳ ಗುರಿ ಹೆಚ್ಚಿಸಲಾಗಿದ್ದು, ಅದರಲ್ಲಿ 2372 ಜನರು ಅರ್ಜಿ ಸಲ್ಲಿಸಿದ್ದು, 3757 ಬಾಕಿ ಉಳಿದಿರುತ್ತಾರೆ. ಕಾರಣ ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ಕೊಟ್ಟು ಪರಿಣಾಮಕಾರಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.