ಪ್ರಧಾನಮಂತ್ರಿ ಫಸಲ್ ಬಿಮಾಗೆ ನೊಂದಣಿ ಮಾಡಿಸಿಕೊಳ್ಳಲು ಖೂಬಾ ಕರೆ

ಬೀದರ:ಜು.17:ರೈತರ ಬೆಳೆಗೆ ಸುರಕ್ಷಾ ಕವಚವಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023-24ನೇ ಸಾಲಿಗೆ ರೈತರ ಬೆಳೆಗಳಿಗೆ ನೊಂದಣಿ ಮಾಡಿಸಿಕೊಳ್ಳಲು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಕರೆ ಕೊಟ್ಟಿದ್ದಾರೆ.

2022-23ನೇ ಸಾಲಿಗೆ ಸ್ಥಳಿಯ ವಿಪತ್ತು ಪರಿಹಾರ ನಿಧಿಯಡಿ ಒಟ್ಟು 1,38,169 ರೈತರಿಗೆ ರೂ. 23.63 ಕೋಟಿ ಪರಿಹಾರ ಮತ್ತು ಕ್ರಾಪ್ ಕಟಿಂಗ್ ಎಕ್ಸಪರಿಮೆಂಟನಲ್ಲಿ ಒಟ್ಟು 73,331 ರೈತರಿಗೆ ರೂ. 27.32 ಕೋಟಿ ಒಟ್ಟು 50.95 ಕೋಟಿ ಪರಿಹಾರ ನಮ್ಮ ರೈತರ ಖಾತೆಗೆ ಜಮೆಯಾಗಿರುತ್ತದೆ. ಹಾಗಾಗಿ ಪ್ರತಿ ವರ್ಷ ನಮ್ಮ ಜಿಲ್ಲೆಯ ರೈತರ ಬೆಳೆಗಳು ಹಾಳಾದಾಗ ಅವರ ಹಾಳಾದ ಬೆಳೆಗಳಿಗೆ ಸೂಕ್ತವಾದ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸತತವಾಗಿ 7 ವರ್ಷಗಳಿಂದ ಬೀದರ ಜಿಲ್ಲೆಯೂ ನೊಂದಣಿ ಮಾಡುವುದರಲ್ಲಿ, ಪರಿಹಾರ ಪಡೆದುಕೊಳ್ಳುವಲ್ಲಿ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ, ಆದ್ದರಿಂದ ಕೆಲವೊಂದಿಷ್ಟು ಜನ ಇದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ, 60 ವರ್ಷಗಳ ಅಧಿಕಾರ ನಡೆಸುವಾಗ ಇಂತಹ ಯೋಜನೆಗಳು ಕೊಡಲು ಆಗದೆ ಇರುವವರು ಇಂದು ಅಪಪ್ರಚಾರ ಮಾಡುತ್ತಿದ್ದಾರೆ, ದಯಮಾಡಿ ರೈತರು ಯಾವೂದೇ ಕಾರಣಕ್ಕೂ ಸುಳ್ಳು ವದಂತಿಗಳಿಗೆ, ಅಪಪ್ರಚಾರಕ್ಕೆ ಕಿವಿಗೂಡದೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದು ರೈತರಲ್ಲಿ ವಿನಂತಿಸಿಕೊಂಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 2023-24ನೇ ಸಾಲಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೊಂದಣಿ ಪ್ರಾರಂಭವಾಗಿದೆ, ಈ ವರ್ಷವು ಸಹ ರಾಷ್ಟ್ರೀಕೃತ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್, ಕಾಮನ್ ಸರ್ವಿಸ್ ಸೆಂಟರ್, ಮತ್ತು ಗ್ರಾಮ-ಒನ್‍ಗಳಲ್ಲಿ ರೈತರು ತಮ್ಮ ಬೆಳೆಗಳನ್ನು ನೊಂದಾಯಿಸಿಕೊಳ್ಳಲು ಸಚಿವರು ಕೋರಿದ್ದಾರೆ.

ನೊಂದಣಿ ಮಾಡಿಕೊಳ್ಳುವಾಗ ರೈತರು ತಮ್ಮ ಆಧಾರ ಕಾರ್ಡ, ಹೊಲದ ಪಹಾಣಿ, ಆಧಾರ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು ಹಾಗೂ ದಿನಾಂಕ: 31-07-2023 ರೊಳಗೆ, ಉದ್ದು, ಹೆಸರು, ಸೊಯಾ, ಅವರಿ, ತೊಗರಿ, ಜೋಳ ಬೆಳೆಗಳ ನೊಂದಣಿ ಮಾಡಿಸಿಕೊಳ್ಳಬೇಕು ಹಾಗೂ ಸೂರ್ಯಕಾಂತಿ ಬೆಳಗೆ 16-08-2023 ರೊಳಗಾಗಿ ನೊಂದಾಯಿಸಿಕೊಳ್ಳತಕ್ಕದ್ದು.

ಪ್ರತಿ ವರ್ಷದಂತೆ ಈ ವರ್ಷವು ಸಹ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಬೆಳೆಗಳನ್ನು ನೊಂದಾಯಿಸಬೇಕಾಗಿ ಕೊರುತ್ತಾ, ನೊಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಟೋಲ್ ಫ್ರಿ ಸಂಖ್ಯೆ: 1800-200-5142 ಕರೆಮಾಡಿ ಮಾಹಿತಿ ಪಡೆದುಕೊಳ್ಳಲು ಸಚಿವರು ತಿಳಿಸಿದ್ದಾರೆ.