ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ-ಮಧ್ಯಾಹ್ನ ಉಪಹಾರ ಯೋಜನೆ:ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ, ಬಾಳೆ ಹಣ್ಣು ವಿತರಣೆಗೆ ಚಾಲನೆ

ಕಲಬುರಗಿ,ಡಿ.1: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಮತ್ತು ರಾಜ್ಯ ಸರ್ಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ಅಥವಾ ಬಾಳೆ ಹಣ್ಣು ವಿತರಿಸುವ ಯೋಜನೆಗೆ ಬುಧವಾರ ನಗರದ ಎಂ.ಬಿ. ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ (ಅಕ್ಷರ ದಾಸೋಹ ಯೋಜನೆ) ಮತು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ಯದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿ.ಡಿ.ಪಿ.ಐ ಅಶೋಕ ಭಜಂತ್ರಿ ಅವರು ಉತ್ತರ ಕರ್ನಾಟಕ ಭಾಗದ ಬಹುತೇಕ ಮಕ್ಕಳಲ್ಲಿ ಅಪೌಷ್ಠಿಕತೆವಿರುವುದು ಅಧ್ಯಯನದಿಂದ ದೃಢಪಟ್ಟಿರುವ ಕಾರಣ ರಾಜ್ಯ ಸರ್ಕಾರವು ಪ್ರಾಯೋಗಿಕವಾಗಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 1 ರಿಂದ 8 ತರಗತಿ ವರೆಗಿನ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೋಸ್ಕರ ಮಧ್ಯಾಹ್ನದ ಬಿಸಿಯೂಟದೊಂದಿಗೆ ಒಂದು ಮೊಟ್ಟೆ ಅಥವಾ ಒಂದು ಬಾಳೆ ಹಣ್ಣು ವಿತರಿಸುವ ಮಹತ್ವಕಾಂಕ್ಷೆಯ ಯೋಜನೆ ಇಂದಿನಿಂದ ಜಾರಿಗೊಳಿಸಿದ್ದು, ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಇದು ತುಂಬಾ ನೆರವಾಗಲಿದೆ ಎಂದರು.
ವಾರದಲ್ಲಿ ಮೂರು ದಿನ ಮಕ್ಕಳಿಗೆ ಒಂದು ಮೊಟ್ಟೆ ಮಧ್ಯಾಹ್ನದ ಊಟದೊಂದಿಗೆ ನೀಡಲಾಗುತ್ತಿದೆ. ಮೊಟ್ಟೆ ಸೇವಿಸದವರಿಗೆ ಒಂದು ಬಾಳೆ ಹಣ್ಣು ನೀಡಲಾಗುವುದು. ಜಿಲ್ಲೆಯ 2.85 ಲಕ್ಷ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ. ಈ ಯೋಜನೆ 2022ರ ಮಾರ್ಚ್ ವರೆಗೆ ಜಾರಿಯಲ್ಲಿರಲಿದ್ದು, ತದನಂತರ ಇದರ ಸಾಧಕ-ಬಾಧಕ ನೋಡಿ ಸರ್ಕಾರದ ಮುಂದಿನ ಯೋಜನೆ ರೂಪಿಸಲಿದೆ ಎಂದರು.
ಮೊಟ್ಟೆ ಸವಿದ ಮಕ್ಕಳು: ಇಂದು ಮಧ್ಯಾಹ್ನದ ಬಿಸಿಯೂಟದ ಜೊತೆ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸಲಾಯಿತು. ಮಕ್ಕಳು ಸಂತಸದಿಂದ ಮೊಟ್ಟೆ ಮತ್ತು ಬಾಳೆ ಹಣ್ಣು ಸೇವಿಸಿದರು. ಮೊಟ್ಟೆ ಸೇವನೆಯಿಂದ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಲಿದೆ ಎಂದು ಶಾಲಾ ಮಕ್ಕಳು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಜಿಲ್ಲಾ ಪಂಚಾಯತಿಯ ಶಿಕ್ಷಣಾಧಿಕಾರಿ (ಮಧ್ಯಾಹ್ನ ಬಿಸಿಯೂಟ ಯೋಜನೆ) ರಾಮಲಿಂಗಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್ ಮುಜೀಬ್, ಶಿಕ್ಷಣ ಸಂಯೋಜಕ ಸಾಯಬಣ್ಣಾ, ಶಾಲಾ ಮುಖ್ಯಗುರುಗಳಾದ ಮಡಿವಾಳಮ್ಮ ಸೇರಿದಂತೆ ಅನೇಕ ಶಿಕ್ಷಕರು, ಸಿ.ಆರ್.ಪಿ.-ಬಿ.ಆರ್.ಪಿ.ಗಳು ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು.