ಪ್ರಧಾನಮಂತ್ರಿ ಜಲ ಜೀವನ ಮಿಷನ್ ಗ್ರಾಮೀಣರಿಗೆ ನುಂಗಲಾರದ ತುತ್ತು

ಕಮಲನಗರ:ಏ.26: ಕಮಲನಗರ ತಾಲ್ಲೂಕಿನ ಮದನೂರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಹರ್ ಘರ ಜಲ ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಲಜೀವನ್ ಮಿಷನ್ ಕಾಮಗಾರಿ ಯೋಜನೆಯ ಅಂಗವಾಗಿ ಗ್ರಾಮದ ಎಲ್ಲಾ ಗಲ್ಲಿಗಳ ರಸ್ತೆಗಳನ್ನು ಅಗೆಯಲಾಗಿದೆ ಇದರಿಂದ ಜನರಿಗೆ, ಜಾನುವಾರುಗಳಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಅಲ್ಲದೆ ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರನ್ನು ಕಾಯುವ ಪರಿಸ್ಥಿತಿ ಉಂಟಾಗಿದೆ. ಜಾನುವಾರಗಳು ರಸ್ತೆ ಅಗೆದ ಗುಂಡಿಯಲ್ಲಿ ಬಿದ್ದು ಕಾಲು ಮುರಿದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಎಲ್ಲ ವಿಷಯಗಳನ್ನು ಗುತ್ತೇದಾರರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಗ್ರಾಮದ ಸಂಪೂರ್ಣ ಕುಡಿಯುವ ನೀರಿನ ಪೈಪ್ಲೈನ್ ಹಾಳಾಗಿವೆ ಇದರಿಂದ ಗ್ರಾಮಸ್ಥರು ಕೊಡ ಹಿಡಿದು ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರಿಗೆ ಒಂದುಕಡೆ ಕೊರೊನಾ ಕಂಟಕ ಉಂಟಾದರೆ ಇನ್ನೊಂದು ಕಡೆ ಜಲ ಜೀವನ ಮಿಷನ್ ಕಾಮಗಾರಿ ಕಂಟಕ ದೊಡ್ಡ ಪ್ರಮಾಣದಲ್ಲಿ ಉಲ್ಬಣವಾಗಿದೆ. ಇನ್ನೊಂದೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತದೆ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೆ, ವೃದ್ಧರು ಮಕ್ಕಳು ಗುಂಡಿಯಲ್ಲಿ ಬಿದ್ದು ಸಾವುನೋವು ಗಳಿಗೆ ತುತ್ತಾಗಬಹುದು. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಉತ್ತಮ ನೀರಿನ ಸಂಪರ್ಕದ ಜೊತೆಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಯೋಜನೆ ಬಗ್ಗೆ ಆಕ್ಷೇಪಣೆ ಎತ್ತಿರುವ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬಿರಾದಾರ ಯೋಜನೆ ಗ್ರಾಮಸ್ಥರಿಗೆ ಅಸಮರ್ಪಕ ವಾಗಿದೆ ಅಲ್ಲದೆ ದುಡಿದ ಹಣವನ್ನು ವ್ಯಯಿಸುವುದರಿಂದ ದುಬಾರಿಯಾಗಲಿದೆ. ಜಾನುವಾರುಗಳಿಗೆ ದಿನನಿತ್ಯ ನೂರಾರು ಲೀಟರ್ ನೀರಿನ ಅವಶ್ಯಕತೆ ಇದ್ದು ಈ ಯೋಜನೆಯಿಂದ ಅದು ಸಾಧ್ಯವಾಗುವುದಿಲ್ಲ. ಆರಂಭದಲ್ಲಿ ಎರಡು ರೂಪಾಯಿ ಇದ್ದ ಶುದ್ಧಕುಡಿಯುವ ನೀರಿನ 20 ಲೀಟರ್ ಕ್ಯಾನ್ ಗೆ ಇಂದಿಗ ಐದು ರೂಪಾಯಿಗೆ ಏರಿಸುವ ಗುಸುಗುಸು ಮಾತುಗಳು ನಡೆಯುತ್ತದೆ ಮುಂದೆ ಮನೆಮನೆಗೆ ಗಂಗೆಯು ಸಹ ಹೀಗೆ ದುಬಾರಿಯಾಗಲಿದೆ ಗ್ರಾಮಸ್ಥರು ನೀರಿಗಾಗಿಯೇ ದುಡಿಯುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಯೋಜನೆಗೆ ರಿಯಾಯಿತಿ ನೀಡುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವದ ಯೋಜನೆಯಾದ ಜಲ ಜೀವನ್ ಮಿಷನ್ ಮನೆಮನೆಗೆ ಗಂಗೆ ಉತ್ತಮ ಯೋಜನೆ ಆದರೂ ಗ್ರಾಮಸ್ಥರಿಗೆ ಆರ್ಥಿಕ ಹೊರೆಯಾಗಲಿದೆ ಅಲ್ಲದೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕು ಎಂಬ ಆತಂಕವು ಉಂಟಾಗಿದೆ. ಯೋಜನೆಯ ಭಾಗವಾಗಿ ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್ ನೀರು ಬಳಸುವಂತೆ ಪ್ರತಿ ಮನೆಗೆ ಪ್ರತ್ಯೇಕವಾಗಿ ನಳ ಮೀಟರ್ ಹಾಗೂ ಶುಲ್ಕ ನಿಗದಿ ಇದು ಗ್ರಾಮಸ್ಥರಿಗೆ ಆರ್ಥಿಕ ಹೊರೆಯಾಗಲಿದೆ. ಜಾನುವಾರುಗಳಿಗೆ ದಿನನಿತ್ಯ ನೂರಾರು ಲೀಟರ್ ನೀರಿನ ಅವಶ್ಯಕತೆ ಇರುತ್ತದೆ ಇದರಿಂದ ಜನರಿಗೆ ಸಾಧ್ಯವಾಗುವುದಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯೆ ಪೂಜಾ ಗುಂಡಪ್ಪಾ ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣರ ಹಣಕಾಸಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಗ್ರಾಮದ ಒಳ್ಳೆಯ ರಸ್ತೆಗಳನ್ನು ಒಡೆದು ಹೊಸ ಪೈಪ್ ಲೈನ್ ಸಂಪರ್ಕಕಲ್ಪಿಸಲು ಪ್ರತಿ ಮೀಟರ್ ಅಳವಡಿಕೆ 15,000 ವೆಚ್ಚವಾಗುತ್ತದೆ ಇದು ಗ್ರಾಮೀಣರಿಗೆ ಅನಾನುಕೂಲ ಎಂದು ಗ್ರಾಮದ ಯುವಕ ಸಂದೀಪ್ ಬೂರೆ ಆಕ್ಷೇಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇಕಡ 47ರಷ್ಟು ಅನುದಾನದ ಜೊತೆಗೆ ಗ್ರಾಮ ಪಂಚಾಯತಿ ಶೇಕಡ 10ರಷ್ಟು ಜನರ ವಂತಿಕೆ ಅನುದಾನ ಸೇರಿದ್ದು ಇದು ಬರಗಾಲದ ಸಮಯದಲ್ಲಿ ಗ್ರಾಮಸ್ಥರಿಗೆ ದೊಡ್ಡಮಟ್ಟದ ಹೊರೆಯಾಗಲಿದೆ ಎಂದು ಗ್ರಾಮದ ಯುವಕ ವೈಜಿನಾಥ ದಾಬಕೆ ಹೇಳಿದ್ದಾರೆ.
ಸರ್ಕಾರ ಇತ್ತ ಗಮನ ಹರಿಸಿ ಗ್ರಾಮಸ್ಥರ ನೋವಿಗೆ ಸ್ಪಂದಿಸುವ ಮೂಲಕ ಸಹಕಾರಕ್ಕೆ ಮುಂದಾಗಬೇಕಿದೆ.