ಪ್ರಧಾನಮಂತ್ರಿಗಳ ಕಾರ್ಯಕ್ರಮ ಹಬ್ಬವಾಗಬೇಕು

ಬೆಳಗಾವಿ, ಫೆ.25: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿಲ್ಲೆಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಹಬ್ಬವಾಗಬೇಕು. ಕಾರ್ಯಕ್ರಮದ ಯಶಸ್ವಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡರು.
ಫೆ.27 ರಂದು ಕಾರ್ಯಕ್ರಮ ನಡೆಯಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಪೂರ್ವಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಕೃಷಿ ಸಮ್ಮಾನ ಯೋಜನೆಯ ನಿಧಿ ವರ್ಗಾವಣೆ, ರೈಲ್ವೆ ಅಭಿವೃದ್ಧಿ ಯೋಜನೆಗಳು ಹಾಗೂ ಜಲಜೀವನ ಮಿಷನ್ ಯೋಜನೆಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯುತ್ತಿದ್ದು, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂಭ್ರಮದಿಂದ ಭಾಗವಹಿಸಬೇಕು ಎಂದು ಸಚಿವರು ಕರೆ ನೀಡಿದರು.
ಜಿಲ್ಲೆಯಲ್ಲಿ 1132 ಕೋಟಿ ವೆಚ್ಚದ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ರೀತಿ ಬೆಳಗಾವಿ-ಧಾರವಾಡ ರೈಲುಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13 ನೇ ಕಂತಿನ ನಿಧಿಯನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ.
ಕಾರ್ಯಕ್ರಮದ ಸ್ಥೂಲ ಮಾಹಿತಿಯನ್ನು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಮುಂಚಿತವಾಗಿಯೇ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕು.
ಪ್ರಧಾನಮಂತ್ರಿಗಳ ಸನ್ಮಾನ ಹಾಗೂ ಸ್ಮರಣಿಕೆ ನೀಡುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.
ಈ ಭಾಗದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ಸ್ಮರಣಿಕೆ ನೀಡಬೇಕು ಎಂದರು.
ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರ್ಲಿ, ಮಾಧ್ಯಮ ಸಂಚಾಲಕ ರವೀಂದ್ರ ಮುತಾಲಿಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.