ಪ್ರದಾನಿಯವರಿಂದ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಪ್ರಭು ಚವ್ಹಾಣ ಹರ್ಷ

ಬೀದರ, ಜ.18:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 19 ರಂದು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶ ಸ್ವಾತಂತ್ರ್ಯವಾಗಿ 7 ದಶಕಗಳು ಕಳೆದರೂ ಇಂದಿಗೂ ಬಂಜಾರಾ ಸಮುದಾಯದ ಹಲವರ ಮನೆಗಳಿಗೆ ಯಾವುದೇ ದಾಖಲಾತಿಗಳಿರಲಿಲ್ಲ. ಇದರಿಂದಾಗಿ ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೆ. ಕಂದಾಯ ಸಚಿವರಾದ ಆರ್.ಅಶೋಕ ಅವರು ಗ್ರಾಮವಾಸ್ತವ್ಯಕ್ಕಾಗಿ ಔರಾದ ತಾಲ್ಲೂಕಿಗೆ ಬಂದಾಗ ತಾಂಡಾಗೆ ಕರೆದೊಯ್ದು ಅಲ್ಲಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಸಿದ್ದೆ. ಇದರ ಪರಿಣಾಮವಾಗಿ ಈ ಜನತೆ ಗೌರವಯುತ ಜೀವನ ಸಾಗಿಸುವಂತಾಗಲು ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಐತಿಹಾಸಿಕ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.

ನಮ್ಮ ಭಾಗದ 51,900 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ಜನರ ಬಾಳಿಗೆ ಬೆಳಕು ನೀಡುವ ಯೋಜನೆಯನ್ನು ಜಾರಿಗೊಳಿಸಲು ಕಾರಣೀಕರ್ತರಾದ ಪ್ರಧಾನಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ಕಂದಾಯ ಸಚಿವರಾದ ಆರ್.ಅಶೋಕ ಅವರಿಗೆ ಸಮಸ್ತ ಸಮಾಜದ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಬಂಜಾರಾ ಸಮಾಜದ ಜನತೆಗೆ ಜನವರಿ 19 ಅತ್ಯಂತ ಪ್ರಮುಖ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆಗೆ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಹಕ್ಕು ಪತ್ರ ವಿತರಣೆ ಜರುಗಲಿದೆ. ಸಮಾಜದ ಜನತೆ ಪಾರಂಪರಿಕ ಉಡುಗೆಯೊಂದಿಗೆ ಪರಿವಾರ ಸಮೇತ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಮತ್ತು ಈ ಮೂಲಕ ತಮ್ಮ ಸಂತೋಷವನ್ನು ಪ್ರದರ್ಶಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.