ಪ್ರಥಮ ಪಿಯುಸಿಗೆ ಆನ್ ಲೈನ್ ಪರೀಕ್ಷೆ

ಬೆಂಗಳೂರು, ಜೂ.11-ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ಮಾಡುವಂತೆ ಎಲ್ಲ ಕಾಲೇಜುಗಳಿಗೆ ಪಿಯು ಮಂಡಳಿ ಸುತ್ತೋಲೆ ಹೊರಡಿಸಿದೆ.
ಈ ಮೊದಲು ಪ್ರಥಮ ಪಿಯುಸಿ ಪಾಸ್ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ‌ ಸುರೇಶ್‌ ಕುಮಾರ್ ಹೇಳಿದ್ದರು. ಅದರೆ ಈಗ ಆನ್‌ಲೈನ್ ‌ಪರೀಕ್ಷೆ ನಡೆಸುವುದಾಗಿ ಹೇಳುವ‌ ಮೂಲಕ ವಿದ್ಯಾರ್ಥಿಗಳಿಗೆ ಶಾಕ್‌ ನೀಡಿದ್ದಾರೆ.
ಪಿಯು‌ ಮಂಡಳಿ ಎರಡು ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿದ್ದು ವೆಬ್ ಸೈಟ್ ನಲ್ಲಿ ಮಾದರಿ‌ ಪ್ರಶ್ನೆ ಪತ್ರಿಕೆ ಲಭ್ಯವಿದೆ.
ಇಲಾಖೆ ವೆಬ್​ಸೈಟ್​ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಬೇಕು. ಪ್ರಶ್ನೆಗಳಿಗೆ ಉತ್ತರ ಬರೆದು ವಾಟ್ಸ್ಆ್ಯಪ್, ಇ-ಮೇಲ್, ಅಂಚೆಯಲ್ಲಿ ಕಳುಹಿಸಬೇಕು. ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಉತ್ತರ ಪತ್ರಿಕೆ ರವಾನಿಸಬೇಕು. ನಂತರ ಉಪನ್ಯಾಸಕರು ಮೌಲ್ಯಮಾಪನ ಮಾಡಬೇಕು.
ಮೌಲ್ಯಮಾಪನದ ಬಳಿಕ ಉಪನ್ಯಾಸಕರು ವಿದ್ಯಾರ್ಥಿಗಳ
ಸಾಧನೆ ಟ್ರಾಕಿಂಗ್ ಸಿಸ್ಟಂ ಮೂಲಕ ಫಲಿತಾಂಶ ಅಪ್ಲೋಡ್ ಮಾಡಬೇಕು. ಅಸೈನ್ಮೆಂಟ್ ಲೆಕ್ಕಾಚಾರದಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧಾರ ಮಾಡಿದ್ದು, ಮೊದಲ ಅಸೈನ್ಮೆಂಟ್ ತಲುಪಲು ಜೂ.20 ಕೊನೆಯ ದಿನವಾಗಿದ್ದು, ಉಪನ್ಯಾಸಕರು ಜೂ.25ರೊಳಗೆ ಮೌಲ್ಯಮಾಪನ ಮಾಡಬೇಕು.
ಎರಡನೇ ಅಸೈನ್ಮೆಂಟ್ ಪ್ರಕ್ರಿಯೆ ಜೂ.26 ರಿಂದ ಜು.5ರ ಒಳಗೆ ನಡೆಯಬೇಕು. ಉಪನ್ಯಾಸಕರು ಜು.10ರೊಳಗೆ ಮೌಲ್ಯಮಾಪನ ಮಾಡಿ ಎರಡು ಪತ್ರಿಕೆಗಳ ಅಂಕವನ್ನು ಸಮೀಕರಣ ಮಾಡಿ ಜು.15 ರೊಳಗೆ ಮುಗಿಸಿ, ಜು.20ರೊಳಗೆ ಸ್ಯಾಟ್ಸ್ ಪೋರ್ಟಲ್​ನಲ್ಲಿ ಅಪ್ಲೋಡ್ ಮಾಡಬೇಕು
ಎರಡೂ ಪರೀಕ್ಷೆಗಳ ಅಂಕವನ್ನು ಜು.20ರೊಳಗೆ ಅಪ್ಲೋಡ್ ಮಾಡಲು ಗಡುವು ಮಾಡಲಾಗಿದೆ..