ಪ್ರಥಮ ಚಿಕಿತ್ಸೆ ಮಹತ್ವ ತಿಳಿದಿರಲಿ- ಡಾ.ಶಿಲ್ಪಶ್ರೀ

ಕೋಲಾರ ಮಾ.೨೦: ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಘಾತಗಳಾಗುವುದು ಭಾರತ ದೇಶದಲ್ಲಿ. ಹಾಗಾಗಿ ಪ್ರತಿಯಬ್ಬರೂ ಪ್ರಥಮ ಚಿಕಿತ್ಸೆಯ ಮಹತ್ವ ತಿಳಿದುಕೊಳ್ಳಿ ಎಂದು ಶ್ರೀ ನರಸಿಂಹರಾಜ ಆಸ್ಪತ್ರೆಯ ಮನೋವೈದ್ಯರಾದ ಡಾ.ಶಿಲ್ಪಶ್ರೀ ತಿಳಿಸಿದರು.
ನಗರದ ಬಾಪೂಜೀ ಪ್ರೌಢ ಶಾಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ, ಜ್ಯೂನಿಯರ್ ರೆಡ್‌ಕ್ರಾಸ್ ಘಟಕ ಉದ್ಘಾಟನೆ ಹಾಗೂ ಪ್ರಥಮ ಚಿಕಿತ್ಸೆ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.ಪ್ರತಿದಿನ ೧೬ ಸಾವಿರ ಜನ ಗಂಡಸರು, ಹೆಂಗಸರು ಮತ್ತು ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪತ್ತಿದ್ದಾರೆ. ಇದೇ ರೀತಿ ಸಾವಿರಾರು ಜನ ಅಪಘಾತಗಳಿಂದ ಅಂಗವಿಕಲರಾಗುತ್ತಿದ್ದಾರೆ. ಈ ಬಗ್ಗೆ ಅರಿವು ಪಡೆದುಕೊಳ್ಳುವ ಜೊತೆಗೆ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಆಪತ್ಕಾಲದಲ್ಲಿ ತಕ್ಷಣಕ್ಕೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಜ್ಯೂನಿಯರ್ ರೆಡ್‌ಕ್ರಾಸ್ ಶಾಖೆಗಳನ್ನು ಉದ್ಘಾಟಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಮಾತನಾಡಿ ಮಾನವೀಯತೆ,
ನಿಸ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂ ಪ್ರೇರಣಾ ಸೇವೆ, ಏಕತೆ, ಜೊತೆಗೆ ವಿಶ್ವ ವ್ಯಾಪಕತೆಯ ಬಹುದೊಡ್ಡ ಸೇವಾ ಸಂಸ್ಥೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಭಾರತೀಯ ರೆಡ್ ಕ್ರಾಸ್
ಸಮಿತಿಗೆ ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳು ಸೇರ್ಪಡೆಯಾಗುವ ಮೂಲಕ, ಜ್ಯೂನಿಯರ್ ರೆಡ್ ಕ್ರಾಸ್ ಘಟಕಗಳನ್ನು ಅಸ್ಥಿತ್ವಕ್ಕೆ ತರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬಿತ್ತಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಮಾತನಾಡಿ, ಕೇವಲ ಒಂದು ವಾರದಲ್ಲಿ ತಾಲ್ಲೂಕಿನ ಎಲ್ಲಾ ಪ್ರೌಢ ಶಾಲೆಗಳಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕಗಳನ್ನು ಆರಂಭಿಸುವಂತೆ ಕ್ರಮ ವಹಿಸುವುದಾಗಿ ಮತ್ತು ಈ ಮೂಲಕ ವಿದ್ಯಾರ್ಥಿ ನಾಯಕತ್ವವನ್ನು ಸದೃಢಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕರ್ನಾಟಕ ಜ್ಯೂನಿಯರ್ ರೆಡ್‌ಕ್ರಾಸ್ ಬೆಂಗಳೂರು ವಿಭಾಗೀಯ ಸಂಯೋಜಕ ಶಿವಕುಮಾರ್ ಮಾತನಾಡಿ, ವಿಭಾಗದ ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ಜ್ಯೂನಿಯರ್ ರೆಡ್‌ಕ್ರಾಸ್ ಘಟಕ ಆರಂಭದ ಕಾರ್ಯ ಪ್ರತಿಯಲ್ಲಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ಶಾಲೆಗಳಲ್ಲೂ ಶಾಲಾ ಘಟಕ ಆರಂಭವಾಗಲಿದೆ. ಘಟಕ ಆರಂಭದ ನಂತರ ಪ್ರತಿ ಶಾಲೆಯಿಂದ ಓರ್ವ ಶಿಕ್ಷಕರಿಗೆ ಸಂಪನ್ಮೂಲ ತರಬೇತಿ ನೀಡಲಾಗುವುದು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಆರ್.ಶ್ರೀನಿವಾಸನ್ ಮಾತನಾಡಿ, ವಿದ್ಯಾರ್ಥಿಯಲ್ಲಿ ಶಿಸ್ತು, ಸಮಯ ಪ್ರಜ್ಞೆ, ರಾಷ್ಟ್ರೀಯ ಭಾವೈಖ್ಯತೆ ಮೂಡಬೇಕಾದರೆ ಮೊದಲು ಸಮಾಜದ ಎಲ್ಲರ ಒಳಿತನ್ನು ಬಯಸುವಂತಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜ್ಯೂನಿಯರ್ ಕ್ರಾಸ್ ರಾಜ್ಯ ಉಪ ಸಮಿತಿಯ ಸದಸ್ಯ ಜಿ. ಶ್ರೀನಿವಾಸ್ ವಹಿಸಿದ್ದು, ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯಕ್ರಮ ಜಾರಿ ಅಧಿಕಾರಿ ಡಾ.ಶರಣಪ್ಪ ಗಬ್ಬೂರ್, ಬಾಪೂಜಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯನಿ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.