ಪ್ರಥಮ ಚಿಕಿತ್ಸೆ ದಿನಾಚರಣೆ

ಪ್ರಥಮ ಚಿಕಿತ್ಸೆ ಎಂಬುದು ಮನುಷ್ಯನಿಗೆ ಸಂಜೀವಿನಿಯಂತಹ ಚಿಕಿತ್ಸೆಯಾಗಿರುತ್ತದೆ. ಎಷ್ಟೋ ಬಾರಿ ಪ್ರಥಮ ಚಿಕಿತ್ಸೆಗಳು ಮನುಷ್ಯನ ಜೀವನದ ಅಳಿವು ಮತ್ತು ಉಳಿವನ್ನು ನಿರ್ಧರಿಸಿ ಬಿಡುತ್ತವೆ. ಇಂತಹ ಚಿಕಿತ್ಸೆಗಳ ಕುರಿತು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಥಮ ಚಿಕಿತ್ಸೆಯನ್ನು ಕೆಲವೊಮ್ಮೆ ಒಬ್ಬರು ಇನ್ನೊಬ್ಬರಿಗೆ ನೀಡಬಹುದು. ಇನ್ನೂ ಕೆಲವೊಮ್ಮೆ ನಾವೇ ಸ್ವತಃ ಮಾಡಿಕೊಳ್ಳಬಹುದು.

ಈ ಪ್ರಥಮ ಚಿಕಿತ್ಸೆಯನ್ನು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಎರಡೂ ಕಡೆ ನೀಡಬಹುದು. ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮೇಲೆಯೇ ಅವಲಂಬಿಸಬೇಕಾಗಿಲ್ಲ, ಬದಲಿಗೆ ಮನೆಯಲ್ಲಿಯೇ ದೊರೆಯುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಈ ಪ್ರಥಮ ಚಿಕಿತ್ಸೆಯನ್ನು ನೀವು ಸುಟ್ಟ ಗಾಯಗಳಿಗೆ ನೀಡಿಕೊಳ್ಳಬಹುದು. ಪ್ರಥಮ ಚಿಕಿತ್ಸೆಯ ಐದು ಮುಖ್ಯ ಉದ್ದೇಶಗಳೆಂದರೆ ಜೀವದ ರಕ್ಷಣೆ , ಗಾಯ ಉಲ್ಭಣಗೊಳ್ಳದಂತೆ ನಿಯಂತ್ರಿಸುವುದು, ಶೀಘ್ರ ಚೇತರಿಕೆ, ನೋವು ಶಮನಗೊಳಿಸುವುದು, ಪ್ರಜ್ಞಾಹೀನ ಸ್ಥಿತಿಗೆ ತಲುಪದಂತೆ ಕಾಪಾಡುವುದು. ಹೀಗೆ ಪ್ರಥಮ ಚಿಕಿತ್ಸೆಯೆಂಬುದು ಜೀವ ರಕ್ಷಕವಾಗಿ ಕೆಲಸ ಮಾಡುವುದರಿಂದ ಅದರ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಡಬೇಕಾದ ಅಗತ್ಯವಿರುವುದರಿಂದಲೇ ಪ್ರತೀ ವರ್ಷ ಸೆಪ್ಟೆಂಬರ್‌ ೨ನೇ ಶನಿವಾರವನ್ನು ವಿಶ್ವ ಪ್ರಥಮ ಚಿಕಿತ್ಸೆ ದಿನವನ್ನಾಗಿ ಆಚರಿಸಲಾಗುತ್ತದೆ.

ವ್ಯಕ್ತಿಯ ಜೀವಕ್ಕೇ ಅಪಾಯವೆಂದೆನಿಸುವ ತುರ್ತು ಪರಿಸ್ಥಿತಿಯಲ್ಲಿ, ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸುವ ಹಾಗೂ ಆತನ ಜೀವವನ್ನು ಉಳಿಸಲು ಅನುಸರಿಸುವ ಸರಳ ಪ್ರಕ್ರಿಯೆಯೇ ಪ್ರಥಮ ಚಿಕಿತ್ಸೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜನಸಾಮಾನ್ಯರೇ ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ಉಪಕರಣಗಳ ಬಳಕೆಯಿರುವುದಿಲ್ಲ.ಪ್ರಥಮ ಚಿಕಿತ್ಸೆಯಲ್ಲಿ ನಾವು ಮುಖ್ಯವಾಗಿ ಮೂರು ಅಂಶಗಳೆಡೆಗೆ ಗಮನವಿಡಬೇಕಾಗುತ್ತದೆ. ಅವೆಂದರೆ, ವ್ಯಕ್ತಿಯ ಶ್ವಾಸನಾಳ, ಉಸಿರಾಟ, ರಕ್ತಪರಿಚಲನೆ ಹಾಗೂ ಪೆಟ್ಟು ಬಿದ್ದ ದೇಹದ ಭಾಗವನ್ನು ಇರಿಸಬೇಕಾದ ರೀತಿ. ಜೀವವನ್ನು ಉಳಿಸಲು ನೆರವಾಗುವ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕು.

ಪ್ರಥಮ ಚಿಕಿತ್ಸೆ ಎಂದರೆ ಯಾವುದೇ ರೀತಿಯ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂದು ಹೇಳಬಹುದಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜನಸಾಮಾನ್ಯರು ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಉಪಕರಣಗಳ ಬಳಕೆ ಇರುವುದಿಲ್ಲ. ಈ ಪ್ರಥಮ ಚಿಕಿತ್ಸಾ ವಿಧಾನವು ಸುಶ್ರೂತ ಕಾಲದಿಂದಲೂ ಬಳಕೆಯಲ್ಲಿತ್ತು. ಆದರೆ 1859ರಿಂದೀಚೆಗೆ ಹೆಚ್ಚು ಬೆಳಕಿಗೆ ಬಂದೀತು. ಯುದ್ಧಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್ ಎಂಬುವರು ರೆಡ್‌ಕ್ರಾಸ್ ಸಂಸ್ಥೆಯನ್ನು ಆರಂಭಿಸಿದಾಗ, ಪ್ರಥಮ ಚಿಕಿತ್ಸೆಯ ಮಹತ್ವ ಎಂಥದ್ದು ಎಂಬುದು ಅರಿವಿಗೆ ಬಂದಿತು.

ಪ್ರಥಮ ಚಿಕಿತ್ಸೆಯಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳೆಂದರೆ ವ್ಯಕ್ತಿಯ ಉಸಿರಾಟ, ರಕ್ತ ಪರಿಚಲನೆ, ಪೆಟ್ಟು ಬಿದ್ದ ದೇಹದ ಭಾಗವನ್ನು ಇರಿಸಬೇಕಾದ ಸ್ಥಿತಿ. ರಸ್ತೆ ಅಪಘಾತಗಳಂತಹ ಸಂದರ್ಭದಲ್ಲಿ ಅದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರೆ ಮೊದಲು ಸೇರಿರುವ ಜನರನ್ನು ದೂರ ಸರಿಸಿ, ಅಪಘಾತಕ್ಕೊಳಗಾದ ವ್ಯಕ್ತಿಯ ದೇಹದ ಉಡುಪುಗಳನ್ನು ಸಡಿಲಗೊಳಿಸುವುದರಿಂದ ಆತನಿಗೆ ಉತ್ತಮವಾದ ಗಾಳಿ ದೊರೆಯುತ್ತದೆ. ಒಂದು ವೇಳೆ ವ್ಯಕ್ತಿಯ ಬೆನ್ನುಹುರಿಗೆ ಪೆಟ್ಟಾದ ಲಕ್ಷಣಗಳಿದ್ದರೆ ಆತನ ತಲೆ ಹಾಗೂ ಕುತ್ತಿಗೆಯ ಭಾಗವನ್ನು ಎರಡೂ ಕೈಗಳಿಂದ ಸರಿಯಾದ ಸ್ಥಾನದಲ್ಲಿರಿಸಬೇಕು.

ದೇಹದ ಹೊರಭಾಗದಿಂದ ರಕ್ತಸ್ರಾವವಾಗುತ್ತಿದ್ದರೆ ಸ್ವಚ್ಛವಾದ ಬಟ್ಟೆಯಿಂದ ಆ ಸ್ಥಳವನ್ನು ಗಟ್ಟಿಯಾಗಿ ಒತ್ತಿ ಹಿಡಿಯಬೇಕೆಂಬ ಸಾಮಾನ್ಯ ಜ್ಞಾನ ಇರಲೇಬೇಕಾಗುತ್ತದೆ. ಇಂತಹ ಕೆಲವು ಚಿಕ್ಕ ಪ್ರಯತ್ನಗಳಿಂದ ಅಲ್ಪ ಪ್ರಮಾಣದ ರಕ್ತಸ್ರಾವವನ್ನು ನಿಲ್ಲಿಸ ಬಹುದಾಗಿದೆ. ಚಿಕ್ಕ ಪುಟ್ಟ ಸುಟ್ಟ ಗಾಯಗಳಾದಂಥ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೇ ಅಲ್ಲಿ ಉಂಟಾದ ನೀರು ಗುಳ್ಳೆ ಗಳನ್ನು ಒಡೆಯುವುದು ತುಂಬಾ ಅಪಾಯಕಾರಿ. ಆ ಭಾಗದಲ್ಲಿ ಒಂದು ವೇಳೆ ಉಂಗುರ, ವಾಚ್ ಗಳಂಥ ವಸ್ತುಗಳೇ ನಾದರೂ ಇದ್ದಲ್ಲಿ ಅದನ್ನು ತಕ್ಷಣ ತೆಗೆದು ಹಾಕಬೇಕು.

ಪ್ರಾಣಕ್ಕೆ ಕುತ್ತು ಬಂದಾಗ ಪ್ರಥಮ ಚಿಕಿತ್ಸೆ ನೀಡುವುದು ಅಗತ್ಯ, ಅಪಘಾತ ನಡೆದ ಮೊದಲಿನ ಒಂದು ಗಂಟೆಯ ಅವಧಿಯನ್ನು ಗೋಲ್ಡನ್‌ ಅವರ್‌ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ತುರ್ತು ಪ್ರಾಥಮಿಕ ಚಿಕಿತ್ಸೆ ದೊರಕಿದ್ದಲ್ಲಿ ರೋಗಿಯ ಪ್ರಾಣವನ್ನು ಉಳಿಸಲು ಖಂಡಿತಾ ಸಾಧ್ಯ. ಅನಗತ್ಯ ರಕ್ತಸ್ರಾವ ಅಥವಾ ಮೆದುಳಿನ ಉಂಟಾಗುವ ಹಾನಿಯನ್ನು ಪ್ರಥಮ ಚಿಕಿತ್ಸೆಯಿಂದ ತಡೆಯಬಹುದು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ.