ಪ್ರಥಮ ಆಧಾರ್ ತಿದ್ದುಪಡಿ ಕಾರ್ಯಕ್ರಮಕ್ಕೆ ಚಾಲನೆ

ಕೊರಟಗೆರೆ, ಸೆ. ೨೫- ತಾಲ್ಲೂಕಿನ ಬೋಡಬಂಡೇನಹಳ್ಳಿ ಗ್ರಾಮದ ಸರ್ಕಾರಿ ಪಾಠಶಾಲೆಯಲ್ಲಿ ಪ್ರಥಮ ಆಧಾರ್ ತಿದ್ದುಪಡಿ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಹಿದಾ ಜಮ್‌ಜಮ್ ಚಾಲನೆ ನೀಡಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಥಮ ಆಧಾರ್ ತಿದ್ದುಪಡಿ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಹಿದಾ ಜಮ್‌ಜಮ್ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಆಧಾರ್‍ತಿದ್ದುಪಡಿ ಮತ್ತು ಬ್ಯಾಂಕ್ ಅಕೌಂಟ್ ಮಾಡಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಮಕ್ಕಳಿಗೆ ಸರ್ಕಾರದಿಂದ ಬರುವ ಅನೇಕ ಯೋಜನೆಗಳು ಕೈತಪ್ಪುತ್ತವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಉತ್ತಮ ಭವಿಷ್ಯ ರೂಪಿಸಿ ಎಂದರು.
ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯಗಳು ಅನುಭವಿ ಶಿಕ್ಷಕರಿಂದ ಬೋಧನೆ, ಮಕ್ಕಳಿಗೆ ಬಿಸಿಯೂಟ, ಸೈಕಲ್, ಶೂ, ಸ್ಕಾಲರ್‌ಶಿಪ್, ಉಚಿತ ಪಠ್ಯಪುಸ್ತಕ ಇನ್ನೂ ಅನೇಕ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಸಿಗುತ್ತದೆ. ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ. ಬಹುಮುಖ್ಯವಾಗಿ ಮಕ್ಕಳಿಗೆ ಅವಶ್ಯಕತೆ ಇರುವ ಶೌಚಾಲಯಗಳು, ಹಾಗೆಯೇ ಕುಡಿಯುವ ನೀರು ಇಂತಹ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೇನೆ ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಮಾತನಾಡಿ, ನೂತನವಾಗಿ ನಮ್ಮ ತಾಲ್ಲೂಕಿಗೆ ಬಂದಿರುವ ತಹಶೀಲ್ದಾರ್ ನಾಹಿದಾ ಜಮ್‌ಜಮ್ ಅವರ ಬಳಿ ನಮ್ಮ ಶಾಲೆಯ ಸಮಸ್ಯೆಗಳನ್ನು ತಿಳಿಸಿದಾಗ, ತಕ್ಷಣವೇ ಶಾಲೆಯ ಸಮಸ್ಯೆಗಳ ಬಗ್ಗೆ ಖುದ್ದಾಗಿ ಅವರೇ ಬಂದು ಪರಿಶೀಲಿಸಿ ಶೌಚಾಲಯ ಇಲ್ಲದೆ ಇರುವುದು ಅಡುಗೆ ಕೊಠಡಿ, ಶಿಥಿಲಗೊಂಡಿರುವುದನ್ನು ಅವರು ಗಮನಿಸಿದರು ಹಾಗೂ ಮಕ್ಕಳಿಗೆ ಆಧಾರ್‍ತಿದ್ದುಪಡಿ, ಬ್ಯಾಂಕ್ ಅಕೌಂಟ್ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸ್ಪಂದಿಸಿದರು. ಇಂದು ನಮ್ಮ ಶಾಲೆಗೆ ಆಧಾರ್‍ತಿದ್ದುಪಡಿ ಕಾರ್ಯಕ್ರಮವನ್ನು ಮಾಡಿಕೊಟ್ಟರು. ಎಲ್ಲಾ ಶಾಲಾ ಮಕ್ಕಳಿಗೆ ಆಧಾರ್‍ತಿದ್ದುಪಡಿ ಕೆಲಸವು ಮಕ್ಕಳಿಗೆ ಯಾವುದೇ ಸಮಸ್ಯೆ ಇಲ್ಲದಂತೆ ಸರಾಗವಾಗಿ ನಡೆಯಿತು. ಇಂತಹ ಜನಸ್ನೇಹಿ ತಹಶೀಲ್ದಾರ್ ನಮ್ಮ ತಾಲ್ಲೂಕಿಗೆ ಬಂದಿರುವುದು ನಮ್ಮೆಲ್ಲೆರ ಸೌಭಾಗ್ಯ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ರಂಗನಾಥ್ ಮಾತನಾಡಿ, ನೂತನವಾಗಿ ಗ್ರಾಮ ಸದಸ್ಯನಾಗಿ ಆಯ್ಕೆಯಾಗಿರುವ ನಾನು ಕೂಡ ಇದೇ ಶಾಲೆಯಲ್ಲಿ ಓದಿದವನು. ನಮ್ಮ ಶಾಲೆಗೆ ಆದಷ್ಟು ಶೌಚಾಲಯ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಗ್ರಾ.ಪಂ. ಕಡೆಯಿಂದ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ವರ್ಗ, ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.