ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯನ್ನುಅಚ್ಚುಕಟ್ಟಾಗಿ ನಡೆಸಿ: ಅಪರ ಜಿಲ್ಲಾಧಿಕಾರಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ7: 2024ನೇ ಸಾಲಿನ ಪ್ರಥಮ ಅಧಿವೇಶನ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿನುಸಾರ ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ  ತಿಳಿಸಿದರು.
ಜೂನ್ 6ರಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಜೂನ್ 07 ರಿಂದ ಜೂನ್ 09ರವರೆಗೆ ನಡೆಯಲಿರುವ 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷಾ ಕೇಂದ್ರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಜಿಲ್ಲಾ ಖಜಾನೆಯಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸಂರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ವಹಿಸಬೇಕು. ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳ ವಿರುದ್ಧ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯೊಂದಿಗೆ ಆರೋಗ್ಯ ಇಲಾಖೆಯ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಪರೀಕ್ಷೆ ಪ್ರಾರಂಭವಾಗುವ 02 ಗಂಟೆ ಮುಂಚಿತವಾಗಿ ಹಾಜರಿರಿಸಿ ಅಭ್ಯರ್ಥಿಗಳ ತಪಾಸಣೆ ನಡೆಸಿ, ಪರೀಕ್ಷೆ ಮುಗಿಯುವವರೆಗೆ ಕಾರ್ಯನಿರ್ವಹಸುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಸಂಬಂಧ ಮಾರ್ಗಾಧಿಕಾರಿಗಳು ಹಾಗೂ ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಈ ಅಧಿಕಾರಿಗಳು ಪರೀಕ್ಷಾ ಗೌಪ್ಯ ವಸ್ತುಗಳನ್ನು ಖಜಾನೆಯಿಂದ ನಿಗದಿಪಡಿಸಲಾದ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ವೇಳಾ ಪಟ್ಟಿಯಂತೆ ವಿತರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ವಿಡಿಯೋ ಸಂವಾದದಲ್ಲಿ ಖಜಾನೆಯ ಇಲಾಖೆಯ ಉಪ ನಿರ್ದೇಶಕ ರಾಮಪ್ರಸಾದ್, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಬಳ್ಳಾರಿ ಡಯಟ್‍ನ ಉಪನ್ಯಾಸಕ ರಾಜು ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ, ಉಪನ್ಯಾಸಕ ನಾಗರತ್ನಬಾಯಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.