ಪ್ರಥಮಬಾರಿಗೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಹಿಳೆಯ ಸ್ಪರ್ಧೆ; ಬೆಂಬಲಿಸಲು ಮನವಿ

ದಾವಣಗೆರೆ. ಏ.೧೭; ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ. ಸುಮಾರು ೧೦೫ ವರ್ಷಗಳ ಇತಿಹಾಸವಿರುವ ಈ ಸರಸ್ವತಿ ಮಂದಿರಕ್ಕೆ ಇದೇ ಪ್ರಥಮಬಾರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಆಕಾಂಕ್ಷಿ  ಡಾ.ಸರಸ್ವತಿ ಚಿಮ್ಮಲಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರುಇಲ್ಲಿಯವರೆಗೆ ೨೫ ಜನ ಅಧ್ಯಕ್ಷರು ಸಾಕಷ್ಟು ಕನ್ನಡಮ್ಮನ ಸೇವೆಗೈದಿದ್ದಾರೆ . ಆದರೆ ಇಂತಹ ಪವಿತ್ರವಾದ ಸರಸ್ವತಿಯ ಮಂದಿರಕ್ಕೆ  ಇದುವರೆಗೆ ಒಬ್ಬ ಮಹಿಳೆಯ ರಾಜ್ಯಾಧ್ಯಕ್ಷರಾಗಿ ಪರಿಷತ್ತಿನ ಗದ್ದುಗೆ ಏರದಿರುವುದು ಪ್ರಜಾಪ್ರಭುತ್ವಕ್ಕೊಂದು ಕಪ್ಪು ಚುಕ್ಕೆ , ಅಷ್ಟೇ ಬೇಸರದ ಸಂಗತಿ. ಕಸಾಪಕ್ಕೆ೨೦-೩೦ ವರ್ಷಗಳಿಗೊಬ್ಬ ಮಹಿಳಾ ಸರ್ವಾಧ್ಯಕ್ಷರನ್ನಾಗಿ ಮಾಡುವ , ಅಲ್ಲಿ ಇಲ್ಲಿ ಒಂದೆರೆಡು ಗೋಷ್ಠಿಗಳಲ್ಲಿ ಕಾಟಾಚಾರಕ್ಕೆಂಬಂತೆ ಮಹಿಳೆಗೆ ಅವಕಾಶ ನೀಡಿ ಕೈ ತೊಳೆದುಕೊಂಡಿದ್ದೇ ಹೆಚ್ಚು . ೧೨ ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಗೆ ಸ್ಥಾನ ಕಲ್ಪಿಸಿದ ಅಗ್ಗಳಿಕೆ ಬಸವಾದಿ ಶರಣರಿಗೆ ಸಲ್ಲುತ್ತದೆ . ಅದರಂತೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಗೆ ಸಂವಿಧಾನಾಷ್ಟಕ ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದರಿಂದ ಪ್ರಧಾನಮಂತ್ರಿ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದಾರೆ . ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡಿದ್ದಾಳೆ . ಹೀಗಿರುವಾಗ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಕಲಿಸಿಕೊಡುವುದು ಸಾಹಿತ್ಯದ ಉದ್ದೇಶವಾಗಿದ್ದರೂ ಇಲ್ಲಿ ಮಹಿಳೆಯನ್ನು ಗೌಣವಾಗಿಸಿ ಹಿಂದಕ್ಕೆ ಸರಿಸಲಾಗಿದೆ . ಇಂತಹ ಅಸಮಾನ ಸಮಾಜಕ್ಕೆ ಕಾರಣವಾದ ಲಿಂಗ ತಾರತಮ್ಯ ಹೋಗಲಾಡಿಸುವ ಮಹತ್ತರವಾದ ಹೊಣೆಗಾರಿಕೆ ಇಂದಿನ ಮತದಾರರ ಮೇಲಿದೆ , ಅದರಂತೆ ೨೬ ನೇ ಅಧ್ಯಕ್ಷರಾಗಿ ಮಹಿಳೆ ಕನ್ನಡ ಸಾಹಿತ್ಯ ಸರಸ್ವತಿಯ ಸಾರಥ್ಯ ವಹಿಸಿಕೊಳ್ಳಬೇಕು. ನಾನು ಕೇವಲ ಮಹಿಳೆಯೆಂಬ ಒಂದೇ ಕಾರಣಕ್ಕಾಗಿ ಸ್ಪರ್ಧಿಸುತ್ತಿಲ್ಲ . ನನ್ನ ಸಾಹಿತ್ಯ ಸಾಧನೆ , ರಂಗ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ , ಸಾಮಾಜಿಕ ಸೇವೆ ಮತ್ತು ಮಹಿಳೆಯರ , ಶೋಷಿತರ ಪರ ಹೋರಾಟ ಹಾಗೂ ಮಾನವೀಯ ಕಾಳಜಿಗಳು ನನ್ನನ್ನು ಈ ಹುದ್ದೆಗೆ ಸ್ಪರ್ಧಿಸುವಂತೆ ಪ್ರೇರೇಪಿಸಿವೆ. ಕನ್ನಡ ನಾಡು – ನುಡಿ , ನೆಲ , ಜಲ , ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಕಾಳಜಿವಹಿಸುವುದು .. ಸಾಹಿತ್ಯಕ ಸಂಧರ್ಭದ ಎಲ್ಲ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡುವುದು ಸೇರಿದಂತೆ ಅನೇಕ ಗುರಿಹೊಂದಿದ್ದೇನೆ.ಆದ್ದರಿಂದ ಮತದಾರರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಲೇಖಕ ಮಲ್ಲಿಕಾರ್ಜುನ ಕಡಕೋಳ,ಅಶ್ವಿನಿ ತಳವಾರ್ ಇದ್ದರು.