ಪ್ರತ್ಯೇಕ ಪ್ರಕರಣ: ಅಕ್ರಮ ಮರ ಸಾಗಾಟ; ಪ್ರಕರಣ ದಾಖಲು


ಪುತ್ತೂರು, ಮಾ.೩೧- ಎರಡು ಪ್ರತ್ಯೇಕ ಪ್ರಕರಣದಲ್ಲಿ ವಾಹನಗಳಲ್ಲಿ ಅಕ್ರಮ ಮರ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಎಂಬಲ್ಲಿ ಪಿಕಪ್ ವಾಹನದಲ್ಲಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬಲ್ಲಿ ಮರದ ದಿಮ್ಮಿಗಳನ್ನು ಪಿಕಪ್‌ನಲ್ಲಿ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಲಾಗಿದ್ದು, ವಾಹನ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಾಹನ ಸಹಿತ ಸೊತ್ತುಗಳ ಮೌಲ್ಯ ರೂ. ೩ ಲಕ್ಷ ಎಂದು ಅಂದಾಜಿಸಲಾಗಿದೆ. ವಾಹನಗಳಲ್ಲಿ ವಿವಿಧ ಜಾತಿಯ ಒಟ್ಟು ೨೯ ಮರದ ದಿಮ್ಮಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಕಾರ್ಯಚರಣೆಯಲ್ಲಿ ಪುತ್ತುರು ಅರಣ್ಯ ರಕ್ಷಕರಾದ ರಾಜುಚಂದ್ರ ಎ.ಪಿ, ಸತ್ಯನ್ ಡಿ.ಜಿ. ಭಾಗ್ಯ ಪಿ.ಸಿ, ಯಮುನ ಮತ್ತು ಜೀಪು ಚಾಲಕ ಜಗದೀಶ್ ಪಾಲ್ಗೊಂಡಿದ್ದರು. ಕಾರ್ಯಾಚರಣೆ ವೇಳೆಗೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಮಾರ್ಗದರ್ಶನದಲಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ. ಕಾರ್ಯಪ್ಪ ನಿರ್ದೇಶದಂತೆ ಪುತ್ತೂರು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ಅವರು ತನಿಖೆ ನಡೆಸುತ್ತಿದ್ದಾರೆ.