ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ,ನ.1 ಅಭಿವೃದ್ಧಿ ಹಿತದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಕಲಾಭವನದ ಡಾ. ಬಿ ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಾಗಿದ ಮೆರವಣಿಗೆ ಜುಬಿಲಿ ವೃತ್ತ, ಕೋರ್ಟ್ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿ ತಲುಪಿತು. ಪ್ರತಿಭಟನೆಗೆ ವಿವಿಧ ಸಂಘ?ಸಂಸ್ಥೆಗಳು ಬೆಂಬಲ ನೀಡಿದವು.
ಪ್ರತಿಭಟನಾ ಮೆರವಣಿಗೆಯಲ್ಲಿ ಡೊಳ್ಳು, ಜಗ್ಗಲಗಿ ಮೇಳದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪ್ರತಿಭಟನೆಯುದ್ದಕ್ಕೂ ಎಚ್ ಡಿಎಂಸಿ ಸಾಕು ಡಿಎಂಸಿ ಬೇಕು ಘೋಷಣೆಗಳು ಮೊಳಗಿದವು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಜಿಲ್ಲಾ ಕೇಂದ್ರವಾಗಿರುವ ಧಾರವಾಡ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಅಭಿವೃದ್ಧಿ ಹೆಸರಿನಲ್ಲಿ ಬರುವ ಎಲ್ಲ ಅನುದಾನ ಹುಬ್ಬಳ್ಳಿಯ ಪಾಲಾಗುತ್ತಿದೆ. ಇದರಿಂದ ಧಾರವಾಡ ಹಳ್ಳಿಯಂತಾಗಿದ್ದು, ಪ್ರತ್ಯೇಕ ಪಾಲಿಕೆಯಾದರೆ ಅಭಿವೃದ್ಧಿಗೆ ಸಾಧಿಸಲು ಸಾದ್ಯವಾಗುತ್ತದೆ. ಆದ್ದರಿಂದ ಕೂಡಲೇ ಈ ಬಗ್ಗೆ ಸರ್ಕಾರ ತೀರ್ಮಾನ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಹೀಗೆ ಮುಂದುವರೆದರೇ ಬೃಹತ್ ಹೋರಾಟದ ಮೂಲಕ ಶಾಸಕರು, ಸಂಸದರ ಹಾಗೂ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸಲಾಗುವುದು. ಈ ಹೋರಾಟ ಪ್ರತ್ಯೇಕ ಪಾಲಿಕೆ ರಚನೆ ಆಗುವರೆಗೆ ಮುಂದುವರೆಯಲಿದೆ ಎಂದು ಎಚ್ಚರಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೀಪಕ ಚಿಂಚೋರೆ, ವಿ.ಡಿ. ಕಾಮರೆಡ್ಡಿ, ರವಿ ಮಾಳಗೇರ, ಪ್ರಭಾಚಂದ್ರ ಶೆಟ್ಟಿ, ರಾಜು, ಅಂಬೋರೆ, ಭೀಮಣ್ಣ ಹೊರಕೇರಿ ಸೇರಿದಂತೆ ಅನೇಕರು ಇದ್ದರು.