ಪ್ರತ್ಯೇಕ ದುರಂತ ೬ ಸಾವು

ಚಿತ್ರದುರ್ಗ,ಸೆ.೪- ತಮಿಳುನಾಡಿನ ಕನ್ಯಾಕುಮಾರಿಗೆ ಪ್ರವಾಸಕ್ಕೆ ತೆರಳಿದ ವೇಳೆ ಸಮುದ್ರದಲ್ಲಿ ಈಜುವಾಗ ಮೂವರು ಬೆಂಗಳೂರು ನಿವಾಸಿಗಳು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಚಿತ್ರದುರ್ಗದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಅತಿವೇಗವಾಗಿ ಬಂದ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿದ್ದ ಕುಟುಂಬ ಹೊಸಪೇಟೆ ಕಡೆಯಿಂದ ತುಮಕೂರಿಗೆ ಹೋಗುತ್ತಿದ್ದು ಮೃತಪಟ್ಟವರನ್ನು ಶಂಸುದ್ದಿನ್ (೪೦) ಮಲ್ಲಿಕಾ (೩೭) ಖಲೀಲ್(೪೨), ತಬ್ರೇಜ್ (೧೩) ಎಂದು ಗುರುತಿಸಲಾಗಿದೆ. ಮಕ್ಕಳಾದ ನರ್ಗೀಸ್, ರೆಹನ್, ರೆಹಮಾನ್‌ಗೆ ಗಂಭೀರ ಗಾಯಗಳಾಗಿವೆ.
ಹೆದ್ದಾರಿಯಲ್ಲಿ ಕಾರು ನಿಂತಿರುವುದು ಗಮನಿಸದೆ ಅತಿ ವೇಗವಾಗಿ ಬಂದ ಪರಿಣಾಮ ಕಾರು ನಿಯಂತ್ರಿಸಲಾಗದೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿ, ನಾಲ್ವರ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಹೆದ್ದಾರಿಯಲ್ಲಿ ಪ್ರತಿವಾರ ಇಂಥ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಹೆಚ್ಚಾಗಿ ಹೆದ್ದಾರಿಯಲ್ಲೇ ಲಾರಿ ಸೇರಿದಂತೆ ದೊಡ್ಡ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇವು ನಿಂತಿರುವುದು ತಿಳಿಯದೆ ವೇಗವಾಗಿ ಬರುವ ಕಾರುಗಳು ಡಿಕ್ಕಿಯಾಗಿ ಹಲವು ಜೀವಹಾನಿಯಾಗಿವೆ. ಇಂಥ ವಾಹನಗಳನ್ನು ಹೆದ್ದಾರಿಯಿಂದ ತೆರವು ಮಾಡಬೇಕು ಹಾಗೂ ನಿಲ್ಲಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಾಲಕ ಸಾವು:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಗ್ಯಾಸ್ ಲಾರಿ ಮತ್ತು ಓಮ್ನಿ ವಾಹನ ನಡುವೆ ಅಪಘಾತ ಸಂಭವಿಸಿ ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಚಿತ್ರದುರ್ಗದ ತಮಟುಕಲ್ಲಿನ ನಿವಾಸಿ ಎಂದು ತಿಳಿದುಬಂದಿದೆ. ರಾಮಗಿರಿಗೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಇಬ್ಬರು ಸಮದ್ರಪಾಲು ಯುವತಿ ರಕ್ಷಣೆ

ವಾರಾಂತ್ಯ ಪ್ರವಾಸಕ್ಕಾಗಿ ಕನ್ಯಾಕುಮಾರಿಗೆ ಆಗಮಿಸಿದ್ದ ಬೆಂಗಳೂರಿನ ಪ್ರವಾಸಿಗರಲ್ಲಿ ಇಬ್ಬರು ಸಮುದ್ರಪಾಲಾಗಿ, ಓರ್ವ ಯುವತಿಯನ್ನು ರಕ್ಷಿಸಿರುವ ಘಟನೆ ನಿನ್ನೆ ನಡೆದಿದೆ.
ಮೃತರನ್ನು ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಮಣಿ (೩೦), ಸುರೇಶ್(೩೦) ಮೃತಪಟ್ಟವರು. ನೀರು ಪಾಲಾಗಿದ್ದ ಬಿಂದು ಅವರನ್ನು ಭದ್ರತಾ ಪಡೆಗಳ ಸಿಬ್ಬಂದಿ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು,ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರಿದಿದೆ.ಎರಡು ದಿನಗಳ ಹಿಂದೆ (ಸೆ.೨) ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾದ ೧೦ ಮಂದಿ ಕನ್ಯಾಕುಮಾರಿಗೆ ಪ್ರವಾಸಕ್ಕೆ ಬಂದು ಹೋಟೆಲ್ ಒಂದರಲ್ಲಿ ಎಲ್ಲರೂ ತಂಗಿದ್ದು ನಿನ್ನೆ ಇಲ್ಲಿನ ಕೋವಲಂ ಬೀಚ್?ನ್ನು ನೋಡಲು ಬಂದಿದ್ದಾರೆ.ಎಲ್ಲರೂ ಸಮುದ್ರಕ್ಕೆ ಇಳಿದು ಎಂಜಾಯ್ ಮಾಡುತ್ತಿದ್ದರು. ಈ ಸಂದರ್ಭ ಗುಂಪಿನಲ್ಲಿದ್ದ ಮಣಿ, ಸುರೇಶ್, ಬಿಂದು ಆಳ ಜಾಸ್ತಿ ಇರುವ ನೀರಿನ ಕಡೆಗೆ ತೆರಳಿದ್ದಾಗ ಬಂದ ಬೃಹತ್ ಅಲೆಗಳಿಗೆ ಸಿಲುಕಿ ಮೂವರು ಕೊಚ್ಚಿಹೋಗಿದ್ದಾರೆ.ಈ ವೇಳೆ ಜೊತೆಗಿದ್ದವರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವವರನ್ನು ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾರೆ. ತಕ್ಷಣವೇ ಎಚ್ಚೆತ್ತ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆಗೆ ಮುಂದಾದರೂ ಅದಾಗಲೇ ಸುರೇಶ್? ಮತ್ತು ಮಣಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಬಿಂದು ಅವರನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಕನ್ಯಾಕುಮಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದುರದೃಷ್ಟವಶಾತ್ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು, ಒಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.