ಪ್ರತ್ಯೇಕ ಚಾಮರಾಜನಗರ ರಾಜ್ಯಕ್ಕಾಗಿ ವಾಟಾಳ್ ನಾಗರಾಜ್ ಆಗ್ರಹ

ಚಾಮರಾಜನಗರ, ಜ.03- ಚಾಮರಾಜನಗರವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಹಾಗೂ ಅದಕ್ಕೆ ಬಸವನಾಡು ಎಂದು ಹೆಸರಿಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಅವರು ಇಂದು ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಚಾಮರಾಜನಗರ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಗಡಿನಾಡು ಪ್ರದೇಶವಾದ ಚಾಮರಾಜನಗರ ಜಿಲ್ಲಾ ಕೇಂದ್ರವಾಗಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿರುವುದಿಲ್ಲ. ಇಲ್ಲಿನ ಅಧಿಕಾರಿಗಳು ಜಿಲ್ಲಾ ಕೇಂದ್ರಸ್ಥಾನದಲ್ಲಿರದೆ ಮೈಸೂರಿನಿಂದ ಪ್ರತಿದಿನ ಕಾಟಾಚಾರಕ್ಕಾಗಿ ಓಡಾಡುತ್ತಿದ್ದಾರೆ. ಇದರಿಂದ ಇಲ್ಲಿ ಸಂಪನ್ಮೂಲ ಕೊರತೆ ಉಂಟಾಗಿದೆ. ಕೂಡಲೇ ಇದರ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ಇದ್ದು ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆ ಈ ಬಗ್ಗೆ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಚಾಮರಾಜನಗರ ಜಿಲ್ಲೆಯು ಸಮೃದ್ಧ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಪವಿತ್ರ ಸ್ಥಳವಾಗಿದ್ದು, ಮಲೆಮಹದೇಶ್ವರ ಬೆಟ್ಟ, ಬಂಡೀಪುರ, ಬಿಳಿಗಿರಿರಂಗನಬೆಟ್ಟಗಳಂತಹ ಅರಣ್ಯ ಪ್ರದೇಶಗಳಿಂದ ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿನ ಮೋಳೆಗಳು ಅಲ್ಲಿನ ಜನರಿಂದ ಐತಿಹಾಸ್ಯವಾಗಿದೆ. ಆದರೂ ಚಾಮರಾಜನಗರಕ್ಕೆ ಬರಲು ಮುಖ್ಯಮಂತ್ರಿ ಯಡಿಯೂರಪ್ಪರವರು ಮೂಢನಂಬಿಕೆಗೆ ಒಳಗಾಗಿ ಹಿಂಜರಿಯುತ್ತಿದ್ದಾರೆ.
ಯಡಿಯೂರಪ್ಪರವರು ಅನಾಚಾರ ಮಾಡಿ ಪಕ್ಷಾಂತರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಇವರು ಶಿವಮೊಗ್ಗಕ್ಕೆ ಅನೇಕ ಬಾರಿ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಆದರೆ ಇದುವರೆಗೂ ಚಾಮರಾಜನಗರಕ್ಕೆ ಒಂದು ಬಾರಿಯೂ ಭೇಟಿ ನೀಡಿರುವುದಿಲ್ಲ ಎಂದು ಅವರು ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು ಇನ್ನು ಮುಂದಾದರೂ ಮುಖ್ಯಮಂತ್ರಿ ಯಡಿಯೂರಪ್ಪರವರು ಚಾಮರಾಜನಗರಕ್ಕೆ ಆಗಮಿಸಿ, ಚಾಮರಾಜನಗರದಲ್ಲೇ ತಮ್ಮ ಸಚಿವ ಸಂಪುಟ ನಡೆಸಿ ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು. ಇದರಿಂದ ಜಿಲ್ಲೆಯು ಅಭಿವೃದ್ಧಿ ಆಗುತ್ತದೆ. ಚಾಮರಾಜನಗರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಚಾಮರಾಜನಗರ ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು
ಚಾಮರಾಜನಗರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸದರಿ ಗಣಿಗಾರಿಕೆ ಕಂಪನಿಗಳಿಂದ ಕುಲಷಿತ ನೀರು ಅಕ್ಕಪಕ್ಕದ ಜಮೀನುಗಳಿಗೆ ಹರಿದು, ಹಾಗೂ ಗಣಿಗಾರಿಕೆಯಿಂದ ಬರುವ ಧೂಳು ರೈತರ ಜಮೀನುಗಳ ಫಸಲನ್ನು ಹಾಳು ಮಾಡುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳನ್ನು ಜಿಲ್ಲೆಯಿಂದಲೇ ಓಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ನೀಡುವ ಗೌರವಧನವನ್ನು ಹೆಚ್ಚಿಸಬೇಕು. ಈಗ ನೀಡುತ್ತಿರುವ ಸಂಭಾವನೆಯನ್ನು ಅಧ್ಯಕ್ಷರಿಗೆ ಕನಿಷ್ಠ 20 ಸಾವಿರ, ಉಪಾಧ್ಯಕ್ಷರಿಗೆ 15 ಸಾವಿರ ಹಾಗೂ ಸದಸ್ಯರುಗಳಿಗೆ 10 ಸಾವಿರ ರೂ.ಗಳಂತೆ ನಿಗಧಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಕಾರ್‍ನಾಗೇಶ್, ಸಿ.ಎನ್. ಪ್ರಕಾಶ್, ಸುರೇಶ್‍ನಾಗ್, ಶಿವಲಿಂಗಮೂರ್ತಿ ಇತರರು ಹಾಜರಿದ್ದರು.