ಪ್ರತ್ಯೇಕ ಕುಂಚಿಟಿಗ ನಿಗಮ ಮಂಡಳಿ ಸ್ಥಾಪನೆಗೆ ಶ್ರೀಗಳ ಮನವಿ

ಕೊರಟಗೆರೆ, ನ. ೯- ರಾಜ್ಯದ ಕುಂಚಿಟಿಗ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವುದು ಮತ್ತು ರಾಜ್ಯ ಸರ್ಕಾರ ಕುಂಚಿಟಿಗ ನಿಗಮ ಮಂಡಳಿಯನ್ನು ಪ್ರತ್ಯೇಕ ಕುಂಚಿಟಿಗ ಸಮುದಾಯಕ್ಕೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘ ಮತ್ತು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಕುಂಚಿಟಿಗ ಸಮುದಾಯವು ರಾಜ್ಯದಲ್ಲಿ ೧೭ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಇನ್ನೂ ಸಬಲವಾಗಿಲ್ಲ. ಸಮುದಾಯವು ಅಂತ್ಯಂತ ಹಿಂದುಳಿದಿದ್ದು, ಸಮುದಾಯಕ್ಕೆ ಶಕ್ತಿ ತುಂಬುವಂತಹ ಅವಶ್ಯಕತೆಯಿದೆ. ಸಮುದಾಯದಲ್ಲಿ ೪೮ ಬುಡಕಟ್ಟುಗಳಿದ್ದು, ಬಹುತೇಕ ಎಲ್ಲರೂ ಕೃಷಿಯನ್ನೇ ಮೂಲ ವೃತ್ತಿಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು ಯಾದವ, ಮಡಿವಾಳ, ವಾಲ್ಮೀಕಿ, ಕುರುಬ ಸಮುದಾಯದಂತೆಯೇ ಸಮುದಾಯವಿದ್ದು, ಹಲವು ಸಮುದಾಯಕ್ಕೆ ನಿಗಮ ಮಂಡಳಿಗಳನ್ನು ಸ್ಥಾಪಿಸಿದಂತೆ ನಮ್ಮ ಸಮುದಾಯಕ್ಕೂ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಂತ್ರಿಗಳಿಗೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ರಾಜ್ಯಾಧ್ಯಕ್ಷ ವಿನಯ್ ಪೂಜಾರಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಮುದಾಯ ಅನುಭವಿಸುತ್ತಿರುವ ಸಮಸ್ಯೆ ಸೇರಿದಂತೆ ಸಮುದಾಯಕ್ಕೆ ದೊರೆಯಬೇಕಾದ ಸ್ಥಾನಮಾನಗಳ ಬಗ್ಗೆ, ಸಮುದಾಯದ ಇತಿಹಾಸ ಸೇರಿದಂತೆ ಹಲವು ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಿಕಾರಿಪುರದ ಮುಖಂಡ ಜಗದೀಶ್, ರುದ್ರಪ್ಪ, ಮೈಸೂರಿನ ಪ್ರದೀಪ್ ಸೇರಿದಂತೆ ಹಲವು ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.
ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತುಮಕೂರು, ಮೈಸೂರು, ಹಾಸನ, ರಾಮನಗರ, ಶಿವಮೊಗ್ಗ, ಹಾವೇರಿ, ಕಾರವಾರ, ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು ಸಮುದಾಯದ ಮತವನಷ್ಟೇ ಪಡೆಯುತ್ತಿದ್ದಾರೆ.
ಆದರೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಕುಂಚಿಟಿಗ ಸಮುದಾಯಕ್ಕೂ ಇತರೆ ಹಿಂದುಳಿದ ಸಮುದಾಯಕ್ಕೆ ನೀಡಿರುವ ರೀತಿ ಸೌಲಭ್ಯಗಳನ್ನು ನೀಡುವಂತೆ ಮನವಿ ನೀಡಿದ್ದೇವೆ ಎಂದು ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ.
ಕುಂಚಿಟಿಗ ಮಹಾಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಹನುಮಂತನಾಥ ಸ್ವಾಮೀಜಿ ರವರ ನೇತೃತ್ವದಲ್ಲಿ ಸಮುದಾಯಕ್ಕೆ ಸಿಗಬೇಕಿರುವ ಸ್ಥಾನಮಾನಗಳ ಬಗ್ಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಸದನದಲ್ಲಿ ಚರ್ಚಿಸಿ ಸಮುದಾಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.