ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಹುಬ್ಬಳ್ಳಿ,ಮಾ17 : ಮಾದಿಗ, ಛಲವಾದಿ ಮತ್ತು ತ್ರಿಮತಸ್ಥ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜನಸಂಖ್ಯೆಯ ಆಧಾರದ ಮೇರೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಮತ್ತು ತ್ರಿಮತಸ್ಥ ಸಮುದಾಯಗಳಿಗೆ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಪರಿಶಿಷ್ಟ ಪಂಚಮ ಕುಲ ಬಾಂಧವರ ಒಕ್ಕೂಟದ ಸಂಚಾಲಕ ಮಂಜುನಾಥ ಕೊಂಡಪಲ್ಲಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯಗಳು ಚುನಾವಣೆಯಲ್ಲಿ ಯಾವುದೇ ಪಕ್ಷಗಳು ಜಯ ಗಳಿಸಲು ನಿರ್ಣಾಯಕ ಪಾತ್ರವಹಿಸಿದರೂ ಕೂಡಾ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರ ಪಡೆಯುವಲ್ಲಿ ಹಿಂದುಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಅಧಿಕಾರವನ್ನು ಪಡೆಯುವುದೊಂದೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದ್ದು, ಈ ಹಿನ್ನಲೆಯಲ್ಲಿ ಅಸ್ಪøಶ್ಯತೆಯನ್ನು ಅನುಭವಿಸುತ್ತ ಬಂದಿರುವ ಮಾದಿಗರು, ಮಾಧಿಗರು, ಛಲವಾದಿ ಮತ್ತು ತ್ರಿಮತಸ್ಥ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 36 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳ ಪೈಕಿ 15 ಸೀಟುಗಳನ್ನು ಮಾದಿಗ ಮತ್ತು ತ್ರಿಮತಸ್ಥ ಸಮುದಾಯಗಳಾದ ಸಮಗಾರ, ಡೋಹರ ಮತ್ತು ಮೋಚಿಗಾರರಿಗೆ ಮತ್ತು 14 ಸೀಟುಗಳನ್ನು ಛಲವಾದಿ ಜಾತಿಯ ಅಭ್ಯರ್ಥಿಗಳಿಗೆ ಮತ್ತು ಉಳಿದ 7 ಸೀಟುಗಳನ್ನು ಇತರೆ ಪರಿಶಿಷ್ಟರಿಗೆ ನೀಡಿ ನಮ್ಮ ಮೂಲ ಅಸ್ಪೃಶ್ಯ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ರಾಜಕೀಯ ಬಲ ತುಂಬಬೇಕು ಎಂದು ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಮಾನಂದ ಘೋಡಕೆ, ಮಹೇಶ್ ಹಂಜಗಿ, ಸೂರ್ಯನಾರಾಯಣ, ನಾಗೇಶ್ ಕತ್ರಿಮಾಲ್, ಜಿತೇಂದ್ರ ಘೋಡಕೆ, ಮೇಘರಾಜ್, ಗಂಗಾಧರ ಪೆರೂರ, ಪ್ರಕಾಶ ಹುಬ್ಬಳ್ಳಿ ಉಪಸ್ಥಿತರಿದ್ದರು.