ಪ್ರತ್ಯೇಕ ಅಪಘಾತ: ನಾಲ್ವರು ಸಾವು

ಕಲಬುರಗಿ,ಮೇ.2-ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ ಮತ್ತು ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಹತ್ತಿರ ಸೋಮವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ ಸಮೀಪ ಟಿಪ್ಪರ್ ಮತ್ತು ಬೈಕ್‍ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಅನೀಲ ಪವಾರ (28) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ತಿಳಿದುಬಂದಿಲ್ಲ. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಖಣದಾಳ-ಇಟಗಾ ಗ್ರಾಮದ ಅಶೋಕ (30) ಮತ್ತು ಶರಣು ಎಂಬುವರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ದಾವಲ್ ಮಲಿಕ್ ದರ್ಗಾಕ್ಕೆ ಹೋಗಿ ಸ್ವಗ್ರಾಮಕ್ಕೆ ಮರಳಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಬೈಕ್ ಸ್ಕಿಡ್ಡಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಶಹಾಬಾದ ಮತ್ತು ನೆಲೋಗಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.