ಪ್ರತ್ಯೇಕ ಅಪಘಾತ: ಇಬ್ಬರ ಸಾವು

ಕಲಬುರಗಿ,ಜು.25-ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನಗರದ ಶರಣಸಿರಸಗಿ ಮಡ್ಡಿ ಅಪಾರ್ಟ್‍ಮೆಂಟ್ ತಿರುವಿನ ಹತ್ತಿರ ಬೈಕ್‍ಗೆ ಬಸ್ ಡಿಕ್ಕಿ ಹೊಡೆದು ಬಾಪು ನಗರದ ಶ್ರೀಕಾಂತ ತಂದೆ ಶಿವಾಜಿ ಕಟ್ಟಿಮನಿ (23) ಎಂಬ ಯುವಕ ಮೃತಪಟ್ಟರೆ, ನಗರದ ಡಬರಾಬಾದ್ ಕ್ರಾಸ್ ಸಮೀಪ ಬೈಕ್ ಕುದುರೆಗೆ ಡಿಕ್ಕಿ ಹೊಡೆದು ಮಲ್ಲಿನಾಥ ಎಂಬುವವರು ಮೃತಪಟ್ಟಿದ್ದಾರೆ.
ಶರಣಸಿರಸಗಿ ಮಡ್ಡಿ ಅಪಾರ್ಟ್‍ಮೆಂಟ್ ತಿರುವಿನ ಹತ್ತಿರ ಬೈಕ್‍ಗೆ ಬಸ್ ಡಿಕ್ಕಿ ಹೊಡೆದು ಬಾಪು ನಗರದ ಶ್ರೀಕಾಂತ ಶಿವಾಜಿ ಕಟ್ಟಿಮನಿ (23) ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಕಾಂತ ಬೆಂಗಳೂರಿನ ವಿಧಾನಸೌಧದಲ್ಲಿ ಬೆರಳಚ್ಚುಗಾರನಾಗಿ ಕೆಲಸ ಮಾಡುತ್ತಿದ್ದ. ಆಗಾಗ ಕಲಬುರಗಿಗೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ಕಲಬುರಗಿಗೆ ಬಂದಿದ್ದ ಶ್ರೀಕಾಂತ ಮಧ್ಯಾಹ್ನದ ಊಟ ಮುಗಿಸಿ ಹೊರಗಡೆ ಕೆಲಸ ಇದೆ ಎಂದು ಬೈಕ್ ತೆಗೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ.
ಇನ್ನು ಡಬರಾಬಾದ್ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಲ್ಲಿನಾಥ ಅವರು ಬೆಂಗಳೂರಿನ ಬಿಎಂಟಿಸಿಯಲ್ಲಿ ಬಸ್ ಚಾಕಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಳಂದ ತಾಲ್ಲೂಕಿನ ಹಿತ್ತಲಶಿರೂರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಇದ್ದ ಪ್ರಯುಕ್ತ ಪತ್ನಿಯೊಂದಿಗೆ ಹಿತ್ತಲಶಿರೂರ ಗ್ರಾಮಕ್ಕೆ ಬಂದು ಮತ ಚಲಾಯಿಸಿದ್ದರು. ಡ್ಯೂಟಿ ಇದ್ದ ಕಾರಣಕ್ಕೆ ಅವರು ಪತ್ನಿಯನ್ನು ಹಿತ್ತಲಶಿರೂರ ಗ್ರಾಮದಲ್ಲಿಯೇ ಬಿಟ್ಟು ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದರು. ಈ ಸಂಬಂಧ ಸಂಬಂಧಿಕರ ಬೈಕ್ ಪಡೆದು ಕಲಬುರಗಿಗೆ ಹೊರಟಿದ್ದರು. ಡಬರಾಬಾದ ಕ್ರಾಸ್ ಸಮೀಪ ಕುದುರೆ ಅಡ್ಡ ಬಂದಿದ್ದರಿಂದ ಕುದುರೆಗೆ ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಿನಾಥ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.