ಪ್ರತ್ಯೇಕ ಅಪಘಾತ: ಇಬ್ಬರು ಸಾವು

ಕಲಬುರಗಿ,ಜೂ.22-ನಗರದ ರಾಮ ಮಂದಿರ ವೃತ್ತ ಮತ್ತು ನಗರ ಹೊರವಲಯದ ಕೆರೆಭೋಸಗಾ ಹತ್ತಿರ ನಿನ್ನೆ ಸಾಯಂಕಾಲ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ರಾಮ ಮಂದಿರ ವೃತ್ತದ ಬಳಿ ರಸ್ತೆ ದಾಟುತ್ತಿದ್ದಾಗ ಲಾರಿ ಹಿಂದಿನ ಚಕ್ರದಡಿ ಸಿಲುಕಿ ಸಿರನೂರ ಗ್ರಾಮದ ಅಂಬವ್ವ ಶಿವಲಿಂಗಪ್ಪ (60) ಎಂಬ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಕೆರೆಭೋಸಗಾ ಹತ್ತಿರ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿ ಪಟ್ಟಣ ಗ್ರಾಮದ ಮಲ್ಲಿಕಾರ್ಜುನ ಶಿವಲಿಂಗಯ್ಯ (20) ಎಂಬ ಯುವಕ ಮೃತಪಟ್ಟಿದ್ದಾನೆ. ವೀರಯ್ಯ ಎಂಬುವವರು ಗಾಯಗೊಂಡಿದ್ದಾರೆ.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.