ಪ್ರತಿ ಹಳ್ಳಿ ಜನರಿಗೂ ಕೊವ್ಯಾಕ್ಸಿನ್ ಲಸಿಕೆ ಮಹತ್ವ ತಿಳಿಸಿ – ಸಚಿವ ಆನಂದಸಿಂಗ್

ಕೂಡ್ಲಿಗಿ.ಏ.27 : ಕೊರೋನಾ ಎಂಬ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರವು ಮುಂದಾಗಿದ್ದು ಪ್ರತಿ ಹಳ್ಳಿಹಳ್ಳಿಯಲ್ಲೂ ಕೊವ್ಯಾಕ್ಸಿನ್ ಲಸಿಕೆಯ ಮಹತ್ವ ತಿಳಿಸಿ ಅದನ್ನು ತಪ್ಪದೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸ ಸಂಬಂದಿಸಿದ ಅಧಿಕಾರಿವರ್ಗ ಮಾಡಬೇಕಾಗಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಮತ್ತು ನೂತನ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವ ಆನಂದಸಿಂಗ್ ಅಧಿಕಾರಿವರ್ಗಕ್ಕೆ ಕಿವಿಮಾತು ಹೇಳಿದರು.
ಅವರು ಸೋಮವಾರ ಮಧ್ಯಾಹ್ನ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದ ಸಭಾಂಗಣದಲ್ಲಿ ಆಯೋಜಿಸಿದ ಕೂಡ್ಲಿಗಿ ತಾಲೂಕು ಮಟ್ಟದ ಕೋವಿಡ್ -19 ನಿಯಂತ್ರಣ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕೂಡ್ಲಿಗಿ ತಾಲೂಕಿನ ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ್ ನೀಡಿದ ಕೋವಿಡ್ ನಿಯಂತ್ರಣ, ಪಾಸಿಟಿವ್ ವರದಿ ಬಂದರೆ ತೆಗೆದುಕೊಳ್ಳುವ ಆರೋಗ್ಯ ಇಲಾಖೆಯ ಕಾರ್ಯ, ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡ ಅನೇಕ ಕ್ರಮಗಳಲ್ಲಿ ತಾಲೂಕು ಆಡಳಿತದ ಸಹಕಾರ ಸೇರಿದಂತೆ ಆರೋಗ್ಯ ಇಲಾಖೆಯ ಟೀಮ್ ವರ್ಕ್ ಮಾಹಿತಿ ಪಡೆದ ಸಚಿವ ಆನಂದಸಿಂಗ್ ಕೂಡ್ಲಿಗಿ ಮತ್ತು ಕೊಟ್ಟೂರಿನ ತಾಲೂಕುಗಳಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಅತೀ ಕಡಿಮೆ ಕೊರೋನಾ ಸೋಂಕಿತ ಪ್ರಕರಣಗಳಿವೆ ಅಂದರೆ ಅದಕ್ಕೆ ಇಲ್ಲಿನ ಶಾಸಕರು ಮತ್ತು ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತದ ಕಾರ್ಯವೈಖರಿಗೆ ಅಭಿನಂದನೆ ತಿಳಿಸಿ ನಿರ್ಲಕ್ಷ್ಯ ವಹಿಸದೆ ಅಧಿಕಾರಿಗಳು ಹಳ್ಳಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರತಿಯೊಬ್ಬ ಹಿರಿಯರಿಗೂ ಕೊವ್ಯಾಕ್ಸಿನ್ ಲಸಿಕೆ ಹಾಕಿಸುವ ಕೆಲಸ ತಪ್ಪದೆ ಮಾಡಿ ಎಂದು ಸಚಿವ ಆನಂದಸಿಂಗ್ ತಿಳಿಸಿ ಆರೋಗ್ಯ ಇಲಾಖೆಯಲ್ಲಿ ಯಾವುದೇ ತೊಂದರೆಗಳಿದ್ದರೆ ತಿಳಿಸಿ ಎಂದಾಗ ಕೂಡ್ಲಿಗಿಯ ಸಾರ್ವಜನಿಕ ಆಸ್ಪತ್ರೆಗೆ ಅರವಳಿಕೆ ತಜ್ಞರ ಕೊರತೆ ಇದ್ದು ಅದನ್ನು ಸರಿಪಡಿಸುವಂತೆ ಶಾಸಕ ಎನ್ ವೈ ಗೋಪಾಲಕೃಷ್ಣ ಹಾಗೂ ಆರೋಗ್ಯ ಇಲಾಖೆ ವೈದ್ಯರು ಕೇಳಿದಾಗ ಅದಕ್ಕೆ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು.
ಇಡೀ ಜಿಲ್ಲೆಯಲ್ಲಿ ಹೆಚ್ಚಾಗಿ ನರೇಗಾ ಕೆಲಸ ಕೂಡ್ಲಿಗಿ ತಾಲೂಕಿನ ಜನತೆಗೆ ಉಪಯೋಗವಾಗಿದ್ದು ಕೋವಿಡ್ ಬಗ್ಗೆಯೂ ಹೆಚ್ಚಿನ ಕಾಳಜಿ ಸಂಬಂದಿಸಿದ ಗ್ರಾಮಪಂಚಾಯಿತಿ ಅಧಿಕಾರಿಗಳು ವಹಿಸಬೇಕು ಅಲ್ಲದೆ ನರೇಗಾ ಕೂಲಿಕಾರ್ಮಿಕನೋರ್ವನಿಗೆ ಬಂದರೆ ಯಾವ ಕ್ರಮ ಜರುಗಿಸಬೇಕು ಆಗ ತೆಗೆದುಕೊಳ್ಳಬೇಕಾದ ಆರೋಗ್ಯ ಇಲಾಖೆಯ ಮಾಹಿತಿಯ ಆಧಾರದಲ್ಲಿ ನಡೆಯಬೇಕು ಎಂಬುದನ್ನು ಸಹ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆರೋಗ್ಯ ಇಲಾಖೆಯ ಜೊತೆಗೆ ಇಓ ಮತ್ತು ಪಿಡಿಓ ಸೇರಿಕೊಂಡು ಹಳ್ಳಿಗಳಲ್ಲಿ ಟಾಂಟಾಂ ಮಾಡಿಸಿ ಕೋವಿಡ್ ನಿಯಂತ್ರಣದ ಬಗ್ಗೆ ಕೊವ್ಯಾಕ್ಸಿನ್ ಲಸಿಕೆ ಜನರಿಗೆ ಹಾಕಿಸುವಲ್ಲಿ ಜವಾಬ್ದಾರಿ ತೆಗೆದುಕೊಂಡಲ್ಲಿ ಕೊರೋನಾ ನಿಯಂತ್ರಣ ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಅರೋಗ್ಯ ಇಲಾಖೆ ಪರವಾಗಿ ಸಚಿವರಿಗೆ ಮನವಿ ಮಾಡಿದ ಶಾಸಕ ಎನ್ ವೈ ಗೋಪಾಲಕೃಷ್ಣ :
ತಾಲೂಕಿನಲ್ಲಿ ಜನತೆ ಕೋವಿಡ್ ನಿಯಮ ಪಾಲಿಸುತ್ತಿದ್ದು ತಾವು ಸಹ ಹೋಬಳಿ ಮಟ್ಟದಲ್ಲಿ ಕೋವಿಡ್ ನಿಯಂತ್ರಣ ಸಭೆಯನ್ನು ಕೂಡ್ಲಿಗಿ, ಗುಡೇಕೋಟೆ ಹಾಗೂ ಹೊಸಹಳ್ಳಿ ಭಾಗದಲ್ಲಿ ನಡೆಸಿ ತಿಳಿಹೇಳಿ ಕೊವ್ಯಾಕ್ಸಿನ್ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಂಡು ಮಹಾಮಾರಿ ಕೊರೋನಾ ತೊಲಗಿಸುವ ಕಾರ್ಯಮಾಡುತ್ತಿದ್ದು ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತದ ಅಧಿಕಾರಿಗಳ ಕಾರ್ಯ ತುಂಬಾ ಶ್ಲಾಘನಿಯವಾಗಿದೆ ಆದರೆ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳು 1999-2000 ಸಾಲಿನ ಸೋನಿಯಾ ಪ್ಯಾಕೇಜ್ ನ ಹಣ ಮಂಜೂರಾಗದೆ ವಸತಿಗೃಹಗಳ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ ಅದನ್ನು ಬೇರೆ ಅನುದಾನ ಬಳಕೆ ಮಾಡಿ ಅದನ್ನು ಪೂರ್ತಿಗೊಳಿಸಿದರೆ ಅನುಕೂಲವಾಗುತ್ತದೆ ಕೂಡ್ಲಿಗಿ ತಾಲೂಕಿನ ಆಸ್ಪತ್ರೆಯಲ್ಲಿ ವೈದ್ಯರಿದ್ದು ಅರವಳಿಕೆ ತಜ್ಞರ ಕೊರತೆ ಇದೆ ಅವರನ್ನು ನಿಯೋಜಿಸಬೇಕೆಂದು ಸಚಿವರಲ್ಲಿ ಮತ್ತು ಜಿಲ್ಲಾಧಿಕಾರಿಗಳಲ್ಲಿ ಕ್ಷೇತ್ರದ ಆರೋಗ್ಯ ಇಲಾಖೆಯ ಪರವಾಗಿ ಮನವಿ ಮಾಡಿ ಯಾವುದೇ ಸಮಸ್ಯೆಗಳ ಬಗ್ಗೆ ಫೋನ್ ಕರೆ ಮಾಡಿದಲ್ಲಿ ಸ್ಪಂದಿಸುವಂತೆ ಹಾಗೂ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಮತ್ತು ಪಟ್ಟಣದಲ್ಲಿ ಮಾಜಿ ದೇವದಾಸಿಯರು, ವಿಕಲಚೇತನರು, ನಿರ್ಗತಿಕರು ಹೆಚ್ಚಾಗಿದ್ದು ಅವರಿಗೆ ನಿವೇಶನ ಮತ್ತು ವಸತಿ ಕಲ್ಪಿಸಿಕೊಡುವಲ್ಲಿ ಪಟ್ಟಿ ಮಾಡಿ ಕಳಿಸಿದಲ್ಲಿ ಅದಕ್ಕೆ ಅನುಮೋದನೆ ನೀಡುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲೀಪಾಟಿ ಮತ್ತು ನೂತನ ವಿಜಯನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ ರವರಿಗೆ ಸಭೆಯ ನೇತೃತ್ವ ವಹಿಸಿದ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸಿದರು ಸ್ಪಂದಿಸುವ ಬಗ್ಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ವಸತಿಗೃಹಗಳ ಬಗ್ಗೆ ಎಸ್ಟಿಮೇಟ್ ಮಾಡಿ ಕಳಿಸಿ ಎಂದಾಗ ಈಗಾಗಲೇ ಜಿಲ್ಲಾಪಂಚಾಯತ್ ಉಪವಿಭಾಗದ ಎಇಇ ಮಾಡಿದ್ದು 3.5ಕೋಟಿ ರೂ ಅಂದಾಜು ಎಸ್ಟಿಮೇಟ್ ರೆಡಿಯಾಗಿದೆ ಎಂದಾಗ ಸಚಿವ ಆನಂದಸಿಂಗ್ ನನಗೂ ಒಂದು ಕಾಪಿ ಹಾಕಿ ನೋಡಿ ಅದನ್ನು ಸರಿಪಡಿಸುವ ಕಾರ್ಯಕ್ಕೆ ಕೈಜೋಡಿಸಿ ವಸತಿಗೃಹ ಪೂರ್ಣಗೊಳಿಸುವಲ್ಲಿ ಮುಂದಾಗೋಣ ಎಂದು ಸಚಿವರು ತಿಳಿಸಿದರು.
ಕೋವಿಡ್ ನಿಯಂತ್ರಣ ಮಾಡುವ ಬಗ್ಗೆ ಸರ್ಕಾರದ ನಿಯಮ ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿರುವ ಸವಿವರದ ಮಾಹಿತಿಯನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಜನಾರ್ಧನ್, ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ.ಷಣ್ಮುಖನಾಯ್ಕ್, ಮತ್ತು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿನಯ ಮುದ್ದೇಗೌಡ ನೀಡಿದರು. ವೇದಿಕೆಯಲ್ಲಿ ಅಡಿಷನಲ್ ಎಸ್ಪಿ ಲಾವಣ್ಯ ಇದ್ದರು. ಹೊಸಪೇಟೆ ಸಹಾಯಕ ಸಿದ್ದರಾಮೇಶ್ವರ ಸಭೆಯಲ್ಲಿ ಸ್ವಾಗತ ಕೋರಿದರು. ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ, ಇಒ ಬಸಣ್ಣ, ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ, ಪಿಎಸ್ಐ ಸುರೇಶ, ಬಿಇಓ ಉಮಾದೇವಿ, ಸಿಡಿಪಿಒ ನಾಗನಗೌಡ, ಟಿಎಸ್ ಡಬ್ಲ್ಯೂಜಗದೀಶ, ಮುಖ್ಯಾಧಿಕಾರಿ ಫಕ್ರುದ್ದೀನ್, ಬಿಸಿಎಂ ತಾಲೂಕ ವಿಸ್ತೀರ್ಣಾಧಿಕಾರಿ ಪಂಪಾಪತಿ, ಜೆಸ್ಕಾಂ ಎಇಇ ರಾಜೇಶ ಸೇರಿದಂತೆ ಇತರೆ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.