ಪ್ರತಿ ಹಳ್ಳಿಗಳಿಗೆ ಶಾಸಕ ಭೇಟಿಶಾಲಾಮಕ್ಕಳಿಗೆ ಪುಸ್ತಕ, ಬಟ್ಟೆ ವಿತರಿಸಿದ ಡಾ ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 31:- ಶಾಸಕರಾದ ನಂತರ ಡಾ ಶ್ರೀನಿವಾಸ ಪ್ರತಿ ಹಳ್ಳಿಗಳಿಗೆ ಕೃತಜ್ಞತೆ ಸಲ್ಲಿಸಲು ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುತ್ತಿದ್ದು ಅದೇ ರೀತಿ ತಾಲೂಕಿನ  ಶಿವಪುರ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಶಿವಪುರ ಗೊಲ್ಲರಹಟ್ಟಿ ಶಾಲೆಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಮಂಗಳವಾರ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುವುದರ ಜತೆಗೆ ಕೃತಜ್ಞತೆ ಸಲ್ಲಿಸಿ ಅಲ್ಲಿನ ಶಾಲಾಮಕ್ಕಳಿಗೆ ಪುಸ್ತಕ ಸಮವಸ್ತ್ರ ವಿತರಣೆ ಮಾಡಿದರು.
ತಾಲೂಕಿನ ಶಿವಪುರ ಗೊಲ್ಲರಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಸರಕಾರದಿಂದ ನೀಡಲಾಗುವ ಪುಸ್ತಕ, ಸಮವಸ್ತ್ರ ಹಾಗೂ ನೋಟ್ ಬುಕ್, ಪೆನ್ನುಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ವಿತರಿಸಿದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಹಳ್ಳಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸಲು ಶಿಕ್ಷಕರು ಆಸಕ್ತಿ ವಹಿಸಬೇಕು. ಶಾಲೆಯ ಪರಿಸರ ಸ್ವಚ್ಛತೆಯಾಗಿರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಸಮಾಜದಲ್ಲಿ ಜವಾಬ್ದಾರಿ ಹೆಚ್ಚಿದೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಶಿಸ್ತು, ಸಮಯಪ್ರಜ್ಞೆ ಹಾಗೂ ದೇಶಾಭಿಮಾನ ಮೂಡಿಸುವುದರ ಜತೆಗೆ ತಂದೆ -ತಾಯಿ, ಗುರು- ಹಿರಿಯರನ್ನು ಗೌರವಿಸುವಂಥ ವ್ಯಕ್ತಿತ್ವ ರೂಪಿಸಬೇಕು ಎಂದು ತಿಳಿಸಿದರು.
ಶಿವಪುರ ಗೊಲ್ಲರಹಟ್ಟಿ ಸರಕಾರಿ ಶಾಲೆಗೆ ನೂತನ ಕೊಠಡಿಗಳು ಹಾಗೂ ಶೌಚಾಲಯ ಕಟ್ಟಿಸಿಕೊಡುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರಿಗೆ ಗ್ರಾಮಸ್ಥರ ಪರವಾಗಿ ಮುಖ್ಯಶಿಕ್ಷಕ ಕೂಡ್ಲಿಗಿ ಬಿ.ಮಾರೇಶ್ ಅವರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಡಾ.ಪುಷ್ಪಾ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ನರಸಿಂಹನಗಿರಿ ವೆಂಕಟೇಶ್, ಮುಖಂಡರಾದ  ಉದಯ ಜನ್ನು, ಟಿ.ಜಿ.ಮಲ್ಲಿಕಾರ್ಜುನ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಕೋಗಳಿ ಮಂಜುನಾಥ, ಜಯರಾಂ ನಾಯಕ, ಕೂಡ್ಲಿಗಿ ದಿನಕರ, ಮಾದಿಹಳ್ಳಿ ನಜೀರ್, ಸಿ.ಎಸ್.ಪುರ ಬಸವರಾಜ ಇರರಿದ್ದರು.
ನಂತರ, ಬಂಡೆಬಸಾಪುರ ತಾಂಡಾ, ಹಿರೇ ಹೆಗ್ಡಾಳ್, ಜಂಗಮಸೋವೇನಹಳ್ಳಿ ಸೇರಿ ನಾನಾ ಹಳ್ಳಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಭೇಟಿ ನೀಡಿ ಜನರ ಕುಂದು, ಕೊರತೆ ಆಲಿಸಿದರು.