ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಕೋ.ಸಾಲ-ಗೋವಿಂದಗೌಡ

ಕೋಲಾರ,ಜ.೧೫: ಪ್ರತಿ ಶೋಷಿತ,ಬಡ ಕುಟುಂಬಕ್ಕೂ ಸಾಲ ಸೌಲಭ್ಯ ತಲುಪಿಸುವ ಸಂಕಲ್ಪದೊಂದಿಗೆ ಅವಿಭಜಿತ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ೧೦೦ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ವೆಂಗಸಂದ್ರದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಎನ್.ಜಿ.ಹುಲ್ಕೂರು ಹಾಗೂ ವೆಂಗಸಂದ್ರ ಗ್ರಾ.ಪಂ ವ್ಯಾಪ್ತಿಯ ರೈತರು, ಮಹಿಳೆಯರಿಗೆ ಬ್ಯಾಂಕ್ ಸಾಲಸೌಲಭ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಶಕ್ತಿ ಸಹಕಾರಿ ರಂಗಕ್ಕೆ ಮಾತ್ರವಿದೆ, ಯಾವುದೇ ಬ್ಯಾಂಕ್ ಸಾಲ ನೀಡುವುದಿಲ್ಲವೆಂದು ತಿರಸ್ಕಾರಕ್ಕೆ ಒಳಪಟ್ಟ ಬಡ ರೈತರು,ಮಹಿಳೆಯರನ್ನು ಗುರುತಿಸಿ ನೆರವಾಗುವ ಆಲೋಚನೆ ನಮ್ಮದಾಗಿದೆ, ಅಂತಹ ಶಕ್ತಿ,ಬಲಿಷ್ಟತೆ ಸಹಕಾರಿ ರಂಗಕ್ಕಿದೆ ಎಂದರು.
ಜಾತಿ,ಪಕ್ಷರಹಿತವಾಗಿ ಕೇವಲ ೫ ಗುಂಟೆ,೧೦ ಗುಂಟೆ ಜಮೀನು ಹೊಂದಿರುವ ರೈತರಿಗೂ ಸಾಲ ನೀಡುವ ಧ್ಯೇಯ ಹೊಂದಿದ್ದೇವೆ, ಸದಾ ಮಳೆಯಿಲ್ಲದೇ ಬರ ಎದುರಿಸುತ್ತಿದ್ದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೇವರ ಕೃಪೆಯಿಂದ ನೀರು ಕಾಣಿಸುತ್ತಿದೆ, ಡಿಸಿಸಿ ಬ್ಯಾಂಕ್ ಪ್ರಯತ್ನಕ್ಕೆ ಸೊಸೈಟಿಗಳು ಕೈಜೋಡಿಸಬೇಕು, ಕೇವಲ ಪಡಿತರ ವಿತರಣೆಗೆ ಸೀಮಿತವಾಗದೇ ರೈತರು,ಮಹಿಳೆಯರಿಗೆ ನೆರವಾಗುವ ಮೂಲಕ ಬಡ,ಶೋಷಿತರ ಧ್ವನಿಯಾಗಬೇಕು ಎಂದು ಕಿವಿಮಾತು ಹೇಳಿದರು.ಶಾಸಕಿ ಎಂ.ರೂಪಕಲಾ ಮಾತನಾಡಿ, ನಾನು ಶಾಸಕಿಯಾದರೂ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿ ಜವಾಬ್ದಾರಿ ಇದೆ, ಸಾಲ ಅಗತ್ಯವಿರುವವರನ್ನು ಗುರುತಿಸುವ ಕೆಲಸವನ್ನು ಮಾಡಿ, ಆರ್ಥಿಕವಾಗಿ ಬಲ ತುಂಬುವ ಕೆಲಸ ಮಾಡೋಣ ಎಂದು ಕೋರಿದರು.
ಕೆಜಿಎಫ್ ತಾಲ್ಲೂಕಿನ ರೈತರು,ಮಹಿಳೆಯರಿಗೆ ಅತಿ ಹೆಚ್ಚು ಸಾಲ ಸೌಲಭ್ಯ ಒದಗಿಡಸುವುದು ಡಿಸಿಸಿ ಬ್ಯಾಂಕಿನ ಧ್ಯೇಯವಾಗಿದೆ, ಸಾಲ ಪಡೆಯಲು ಅಗತ್ಯ ದಾಖಲೆಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಸಂಗ್ರಹಿಸಬೇಕು, ರೈತರಿಗೆ ಸಾಲ ಸೌಲಭ್ಯದ ಅರಿವು ನೀಡಬೇಕು, ಮಹಿಳೆಯರಿಗೆ ಸಂಘ ರಚಿಸಿಕೊಂಡು ಬಡ್ಡಿರಹಿತ ಸಾಲ ಪಡೆದು ಜನರ ರಕ್ತ ಹೀರುವ ಮೀಟರ್ ಬಡ್ಡಿದಂಧೆಗೆ ಮುಕ್ತಿ ಕಾಣಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಜಿಎಫ್ ತಾಲ್ಲೂಕು ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ,ಪದ್ಮನಾಭರೆಡ್ಡಿ,ಎಂಬಿ.ಕೃಷ್ಣಪ್ಪ, ನಲ್ಲೂರು ಸುರೇಂದ್ರ, ಶಂಕರ್, ಮುಖಂಡರಾದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಭಾಕರ್,ಮಾಜಿ ಗ್ರಾ.ಪಂ ಅಧ್ಯಕ್ಷ ಶ್ರೀರಾಮಪ್ಪ,ನಾರಾಯಣಸ್ವಾಮಿ,ನರೇಶ್ ಸೇರಿದಂತೆ ಅನೇಕ ಮುಖಂಡರು, ಗ್ರಾ.ಪಂ ಅಧ್ಯಕ್ಷರು,ಸದಸ್ಯರು ಹಾಜರಿದ್ದರು.