ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ: ಜಿಲ್ಲಾಧಿಕಾರಿ

ಬೀದರ್:ಆ.13: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಜಿಲ್ಲೆಯಲ್ಲಿ ಸಾರ್ವಜನಿಕರು ಆಗಸ್ಟ್ 13ರಿಂದ 15 ರವರೆಗೆ ತಮ್ಮ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ದೇಶಾಭಿಮಾನ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮನವಿ ಮಾಡಿದ್ದಾರೆ.

ಎಲ್ಲ ಸರ್ಕಾರಿ ಕಚೇರಿ, ಸಾರ್ವಜನಿಕ ಉದ್ಯಮ, ಸಂಘ ಸಂಸ್ಥೆಗಳ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲೂ ಧ್ವಜಾರೋಹಣ ಮಾಡಬೇಕು. ಧ್ವಜ ಶಿಷ್ಟಾಚಾರ ತಪ್ಪದೆ ಪಾಲಿಸಬೇಕು. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ತಿಳಿಸಿದ್ದಾರೆ.

ಎಲ್ಲರಿಗೂ ಸುಲಭವಾಗಿ ರಾಷ್ಟ್ರ ಧ್ವಜ ಲಭಿಸುವಂತೆ ಜಿಲ್ಲೆಗೆ 30 ಸಾವಿರ ರಾಷ್ಟ್ರ ಧ್ವಜಗಳನ್ನು ತರಿಸಲಾಗಿದೆ. ಪ್ರತಿ ರಾಷ್ಟ್ರ ಧ್ವಜಕ್ಕೆ ? 25.50 ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳಲ್ಲಿ ರಾಷ್ಟ್ರ ಧ್ವಜ ಪಡೆಯಬಹುದು ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.