ಪ್ರತಿ ಮನೆಗೂ ಮಳೆ ನೀರು ಕೊಯ್ಲೊ ಪದ್ದತಿ ಕಡ್ಡಾಯ

ಕೋಲಾರ,ಮಾ,೨೯-ಪ್ರತಿವರ್ಷ ಒಂದಲ್ಲಾ ಒಂದು ಸಮಯದಲ್ಲಿ ಮಳೆ ಬಂದೇ ಬರುತ್ತದೆ. ಮಳೆಯ ನೀರನ್ನು ಹಿಡಿದಿಟ್ಟುಕೊಂಡರೆ ಸಾಕು, ವರ್ಷಪೂರ್ತಿ ಸಾಕಾಗುವಷ್ಟು ನೀರು ಸಂಗ್ರಹಣೆ ಮಾಡಬಹುದು. ನೀರಿನ ಕೊರತೆಯನ್ನು ನೀಗಿಸಬಹುದು. ಇದಕ್ಕಾಗಿ ರೂಫ್ ವಾಟರ್ ಹಾರ್ವೆಸ್ಟಿಂಗ್ ಪದ್ಧತಿ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಪ್ರತಿ ಮನೆಯಲ್ಲಿಯೂ ಇದನ್ನು ಕಡ್ಡಾಯಗೊಳಿಸಬೇಕು. ಪ್ರತಿ ಮನೆ ಕಟ್ಟಡಕ್ಕೆ ಲೈಸೆನ್ಸ್ ನೀಡುವಾಗ ಮಳೆ ನೀರು ಕೊಯ್ಲು ಪದ್ಧತಿಯಂತಹ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೆಚ್ಚು ಜಾಗೃತಿ ಮೂಡಿಸುವುದಲ್ಲದೆ, ಇದನ್ನು ಕಡ್ಡಾಯಗೊಳಿಸಬೇಕು ಎಂದು ಈನೆಲ ಈಜಲ ವೆಂಕಟಾಚಲಪತಿ ತಿಳಿಸಿದರು.
ಭಾರತ ಸರ್ಕಾರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ. ಕೋಲಾರ ಜಲಶಕ್ತಿ ಸಚಿವಾಲಯ, ರಾಷ್ಟ್ರೀಯ ಜಲಮಿಷನ್ ಮತ್ತು ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ), ಕೋಲಾರ, ಇವರ ಸಹಯೋಗದಲ್ಲಿ ಕೋಲಾರ ತಾಲ್ಲೂಕಿನ ಕೋಡಿಕಣ್ಣೂರು ಮಾತೃಭೂಮಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಳೆ ನೀರು ಸಂಗ್ರಹಣೆ ಅಭಿಯಾನದಡಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿರುವ ಮನೆಗಳ ಕಡೆಗೆ ಇತರರು ಭೇಟಿ ನೀಡಿ ಅಂತಹ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಂದಕ್ಕೂ ಇತರೆ ಮೂಲಗಳ ನೀರನ್ನೇ ಹುಡುಕುತ್ತಾ ಹೋದರೆ ಇಲ್ಲದ ನೀರನ್ನು ತರುವುದಾದರೂ ಹೇಗೆ? ಮಳೆಯ ನೀರು ಸಂಗ್ರಹಣ ಎಷ್ಟು ಮುಖ್ಯ ಎಂಬುದನ್ನು ತಿಳಿಹೇಳುವ ಕಾಳಜಿ ಎಲ್ಲರಲ್ಲೂ ಮೂಡಬೇಕು. ಆದರೆ ಭಾಷಣಗಳಿಗಷ್ಟೇ ಇದು ಸೀಮಿತವಾಗುತ್ತಿದೆ. ಅನು?ನದಲ್ಲಿ ಇನ್ನೂ ದೂರ ಇದ್ದೇವೆ. ನಾಗರಿಕ ಸಂಘಟನೆಗಳು ಇದಕ್ಕೆ ಒತ್ತು ನೀಡಬೇಕು ಎಂದರು
ಸುವರ್ಣ ಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎನ್.ಗಣೇಶಪ್ಪ ಮಾತನಾಡಿ ನಗರಗಳಲ್ಲಿ ನೀರಿನ ಜಾಗೃತಿ ಉಂಟಾಗುತ್ತಿದ್ದು, ಇದೇ ಜಾಗೃತಿ ಗ್ರಾಮೀಣ ಪ್ರದೇಶಗಳಲ್ಲಿಯೂ ಮೂಡಬೇಕು. ನೀರಿನ ಹಲವಾರು ಸಮಸ್ಯೆಗಳಿಗೆ ಕಾರಣವಾಗಿರುವ ಪೈಕಿ ಆಧುನಿಕ ಕೃಷಿ ಪದ್ಧತಿಯೂ ಒಂದಾಗಿದೆ. ಹೆಚ್ಚು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳಿಗೆ ಮೊರೆ ಹೋದ ಪರಿಣಾಮ ಭೂಮಿಯ ಒಳಗೆ ಇರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ. ಭೂಮಿಯಲ್ಲಿ ೩ ಲಕ್ಷಕ್ಕಿಂತ ಹೆಚ್ಚು ಜೀವಾಣುಗಳು ವಾಸಿಸುತ್ತಿವೆ ಎಂದು ಹೇಳಿದರು.
ಆಧುನಿಕ ಕೃಷಿ ಪದ್ಧತಿಯಿಂದಾಗಿ ಇವೆಲ್ಲ ನಾಶವಾಗುತ್ತಿವೆ. ಸಗಣಿ ಹುಳ, ಎರೆ ಹುಳು, ಇರುವೆ ಮೊದಲಾದ ಜೀವಾಣುಗಳು ಭೂಮಿಯನ್ನು ರಂಧ್ರ ಮಾಡಿ ಮಳೆ ಬಂದಾಗ ನೀರು ಸುಲಭವಾಗಿ ಭೂಮಿಗೆ ಸೇರಿಕೊಳ್ಳಲು ಹಾಗೂ ಭೂಮಿಯು ಆ ನೀರನ್ನು ಸಂಗ್ರಹಿಸಿ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಿದೆ. ದುರಂತವೆಂದರೆ, ಆಧುನಿಕ ಕೃಷಿ ಪದ್ಧತಿಯಿಂದಾಗಿ ಈ ಜೀವಾಣುಗಳು ನಾಶವಾಗುತ್ತಾ ಭೂಮಿಯ ಫಲವತ್ತತೆಯೂ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತ ಪಡೆಸಿದರು,
ರೈತರಿಗೆ ಈ ಬಗ್ಗೆ ಸಮಗ್ರ ತಿಳವಳಿಕೆ ನೀಡುವಲ್ಲಿ ವಿಫಲರಾಗಿದ್ದೇವೆ. ಹಿಂದೆಲ್ಲಾ ಭೂಮಿಯಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತಿತ್ತು. ಹಳ್ಳಕೊಳ್ಳಗಳಲ್ಲಿ ಯಾವಾಗಲೂ ನೀರು ತುಂಬಿರುತ್ತಿತ್ತು. ಈಗ ನೈಸರ್ಗಿಕ ನೀರು ಸಿಗದಂತಾಗಿದೆ. ಸುಸ್ಥಿರ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮಾಡಿದ್ದೇವೆ. ಸಿಮೆಂಟ್ ಕಟ್ಟಡಗಳನ್ನು ಕಟ್ಟುತ್ತಿದ್ದೇವೆ. ಇದರ ಜೊತೆಯಲ್ಲೇ ನೀರು ಇಂಗುವಂತಹ ಪದ್ಧತಿಗಳ ಕಡೆಗೆ ಗಮನ ಹರಿಸುತ್ತಿಲ್ಲ. ಭೂಮಿಯೊಳಗೆ ಪ್ಲಾಸ್ಟಿಕ್ ಮತ್ತಿತರ ಅಂಶಗಳು ಸೇರಿಕೊಂಡು ನೀರು ಇಂಗದಂತಹ ಹಾಗೂ ಇದರಿಂದ ಮತ್ತಷ್ಟು ಹಾನಿಯಾಗುವಂತಹ ಸಂದರ್ಭಗಳನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ ಎಂದರು.