ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇವೆ

ಬೆಂಗಳೂರು, ಏ. ೨೧- ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಎಸಗಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಚೊಂಬು ಕೊಟ್ಟು ಕಾಂಗ್ರೆಸ್ ಕೈಗೆ ಬಲ ತುಂಬಿ, ನಾವು ನಿಮ್ಮ ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯಲ್ಲಿ ಮನವಿ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಜೆಪಿ ಚೊಂಬು ಸರ್ಕಾರ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ಕಟ್ಟು ಪ್ರತಿ ೧೦೦ ರೂಪಾಯಿ ತೆರಿಗೆಯಲ್ಲಿ ರಾಜ್ಯಕ್ಕೆ ಮೋದಿ ಸರ್ಕಾರದಿಂದ ಮರಳಿ ಸಿಗುವುದು ಕೇವಲ ೧೩ ರೂಪಾಯಿ ಮಾತ್ರ ಎಂದಿದ್ದಾರೆ.
ಕನ್ನಡಿಗರು ಬೆವರು ಸುರಿಸಿ ದುಡಿದು ಕೇಂದ್ರ ಸರ್ಕಾರಕ್ಕೆ ೧೦೦ ರೂಪಾಯಿ ತೆರಿಗೆ ಕಟ್ಟಿದರೆ ಮರಳಿ ನಮಗೆ ಸಿಗುವುದು ೧೩ ರೂಪಾಯಿ. ರಾಜ್ಯಕ್ಕೆ ಬರಬೇಕಿದ್ದ ಬರಪರಿಹಾರ, ವಿಶೇಷ ಅನುದಾನ, ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವಿನ ಬದಲಿಗೆ ಸಿಕ್ಕಿದ್ದು ಚೊಂಬು ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಯ ಕೈಗಳಿಗೆ ಚೊಂಬು ಕೊಟ್ಟು ಕಾಂಗ್ರೆಸ್ ಕೈಗಳಿಗೆ ಬಲ ತುಂಬಿ. ನಾವು ನಿಮ್ಮ ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಡಿಕೆಶಿ ಬೆಂಬಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಪೋಸ್ಟ್‌ನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ನ್ಯಾಯಯುತವಾಗಿ ಹಂಚಿಕೆಯಾಗದ ತೆರಿಗೆಯು ದರೋಡೆಗೆ ಸಮಾನ. ಕನ್ನಡಿಗರ ಬೆವರಿಗೆ ತಕ್ಕಫಲ ಸಿಗುತ್ತಿಲ್ಲ. ನಾವು ಕಟ್ಟುವ ೧೦೦ ರೂಪಾಯಿಗೆ ಕೇಂದ್ರದಿಂದ ಬರುತ್ತಿರುವುದು ಕೇವಲ ೧೩ ರೂಪಾಯಿ. ಇದು ಪಾರದರ್ಶಕತೆ ಹಾಗೂ ಸಮಾನ ಹಂಚಿಕೆಯ ಸಮಯ ಎಂದು ಟ್ವೀಟ್ ಮಾಡಿದ್ದಾರೆ.