ಪ್ರತಿ ಮಗುವಿನ ಬೆಳವಣಿಗೆಯಲ್ಲಿ ತಂದೆಯ ಪಾತ್ರ ದೊಡ್ಡದು: ಡಾ. ಮಲ್ಲಿಕಾರ್ಜುನ ಹಂಜಿ

Oplus_131072

ಅಥಣಿ : ಜೂ.17:ಪ್ರತಿಯೊಂದು ಮಗುವಿನ ಸವಾರ್ಂಗೀಣ ಬೆಳವಣಿಗೆಗೆ ತಂದೆ ತಾಯಿಯ ಪಾತ್ರ ಮಹತ್ತರವಾದದ್ದು, ತಾಯಿ ಜನ್ಮ ನೀಡಿದರೆ, ತಂದೆ ನಮ್ಮನ್ನು ಜಗತ್ತಿಗೆ ಪರಿಚಯಿಸುವಂತೆ ಬೆಳೆಸುತ್ತಾನೆ. ತಂದೆಯಾದವನು ತನ್ನ ಮಗನ ಬಗ್ಗೆ ತನಗಿಂತಲೂ ಎತ್ತರವಾದ ಕನಸು ಹೊಂದಿರುತ್ತಾನೆ ಎಂದು ಕೆಎಲ್‍ಇ ಸಂಸ್ಥೆಯ ಎಸ್‍ಎಸ್ ಎಂಎಸ್ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ ಹೇಳಿದರು.
ಅವರು ಶನಿವಾರ ಇಲ್ಲಿನ ಕೆಎಲ್‍ಇ ಸಂಸ್ಥೆಯ ಸಿ. ಬಿ ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಪ್ಪಂದಿರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ, ಅವರ ಉನ್ನತ ಬೆಳವಣಿಗೆಯಲ್ಲಿ ತಂದೆಯ ಪಾತ್ರ ಬಹಳ ದೊಡ್ಡದು, ತಂದೆಯ ಪಾತ್ರವನ್ನು ಸ್ಮರಿಸಿ ಅವರಿಗೆ ಅಭಿನಂದಿಸುವ ಉದ್ದೇಶದಿಂದ ಇಂದು ಎಲ್ಲರ ಫಾದರ್ಸ್ ಡೇ ಆಚರಣೆ ಮಾಡಲಾಗುತ್ತದೆ. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಅಪ್ಪಂದಿರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಾಲ್ಯದ ನೆನಪು ತಂದು ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು, ನೈತಿಕ ಶಿಕ್ಷಣವನ್ನ ಕಲಿಸಿಕೊಡುವುದು ಬಹಳ ಅಗತ್ಯವಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಶ್ರೇಷ್ಠ ಆಸ್ತಿಯನ್ನಾಗಿ ಬೆಳೆಸಬೇಕೆಂದು ಕರೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ಜಗದೀಶ ಹವಾಲ್ದಾರ ಮಾತನಾಡಿ ತಂದೆಯಾದವನು ತಮ್ಮ ಸುಖ ಸಂತೋಷಕ್ಕೆ ಮಹತ್ವ ನೀಡದೆ ಮಗುವಿನ ಸಂತೋಷಕ್ಕೆ ಮಹತ್ವ ನೀಡಿರುತ್ತಾನೆ. ಪ್ರತಿ ಮಗುವಿನ ಬಗ್ಗೆ ಉನ್ನತವಾದ ಕನಸನ್ನು ಹೊಂದಿರುತ್ತಾನೆ. ಮಕ್ಕಳು ತಂದೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಉತ್ತಮ ರೀತಿಯಿಂದ ಅಭ್ಯಾಸ ಮಾಡಬೇಕು. ತಂದೆ ತಾಯಿಯ ಸೇವೆಯನ್ನು ಸ್ಮರಿಸಿ ಅವರನ್ನ ಗೌರವಿಸಬೇಕು ಎಂದು ಸಲಹೆ ನೀಡಿದ ಅವರು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಸ್ಪರ್ಧೆಗಳಲ್ಲಿ ಅನೇಕ ಪಾಲಕರು ಉತ್ಸಾಹದಿಂದ ಭಾಗವಹಿಸಿದ್ದು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ದಶರಥ ಮದಭಾವಿ ಸ್ಪರ್ಧಾ ವಿಜೇತ ಅಪ್ಪಂದಿರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರೋಹಿತ್ ಕುಂಬಾರ ಸ್ವಾಗತಿಸಿದರು. ಶ್ರೇಯಾ ರಾಥೋಡ್
ಕಾರ್ಯಕ್ರಮ ನಿರೂಪಿಸಿದರು. ಅನನ್ಯ ಸಂಕ್ರಟ್ಟಿ ವಂದಿಸಿದರು.