ಪ್ರತಿ ಮಕ್ಕಳಿಗೂ ಜಂತುಹುಳ ಮಾತ್ರೆ ನೀಡಿ

ಕೋಲಾರ, ಆ. ೧- ಶಾಲಾ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಶಾಲಾ ಕಾಲೇಜು ಬಿಟ್ಟು ಹೋದ ಹಾಗೂ ಇಟ್ಟಿಗೆ ಕಾರ್ಖಾನೆ ಇನ್ನೂ ಮುಂತಾದ ಸ್ಥಳಗಳಲ್ಲಿ ಕಾಣುವಂತಹ ಪ್ರತಿಯೊಬ್ಬ ಮಕ್ಕಳಿಗೂ ಜಂತುಹುಳ ಮಾತ್ರಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಸಾಮೂಹಿಕ ಜಂತುಹುಳ ನಿರ್ವಹಣಾ ಕಾರ್ಯಕ್ರಮ ಮತ್ತು ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ-೨೦೨೨ ಕಾರ್ಯಕ್ರಮಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ಸಹ ಪೂರ್ಣ ಪ್ರಮಾಣದಲ್ಲಿ ಜಂತುಹುಳ ಮಾತ್ರೆಗಳನ್ನು ಮಕ್ಕಳಿಗೆ ನೀಡಬೇಕು. ಈ ಕಾರ್ಯಕ್ಕೆ ಎಲ್ಲಾ ಇಲಾಖೆಯವರು ಸಹಕಾರವನ್ನು ನೀಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪಟ್ಟಿ ಮಾಡಿ ಅವರಿಗೂ ಸಹ ಮಾತ್ರೆಗಳನ್ನು ಒದಗಿಸಬೇಕು. ಕೋವಿಡ್ ಲಸಿಕೆಯನ್ನು ಕಾಲ ಕಾಲಕ್ಕೆ ಸೂಕ್ತವಾಗಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಜಗದೀಶ್ ಅವರು ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆಗಳ ಬಗ್ಗೆ ಮಾಹಿತಿ ನೀಡಬೇಕು. ಎಲ್ಲಾ ಶಾಲಾ-ಕಾಲೇಜು ಮಕ್ಕಳಿಗೆ ಮಾತ್ರೆ ಸಿಗುವಂತೆ ಕಾರ್ಯ ನಿರ್ವಹಿಸುತ್ತೇವೆ. ಶಾಲೆಯ ಶಿಕ್ಷಕರು ಸಹ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದು. ಓ.ಆರ್.ಎಸ್ ಮತ್ತು ಜಿಂಕ್ ಬಗ್ಗೆ ಎಲ್ಲಾ ಪೂರ್ಣ ಮಾಹಿತಿಯನ್ನು ನೀಡಲಾಗುವುದು. ಗ್ರಾಮೀಣ ಮತ್ತು ಸ್ಲಮ್‌ಗಳಲ್ಲಿ ಮಾತ್ರೆಗಳನ್ನು ನೀಡಲಾಗುವುದು. ಎಲ್ಲಾ ಬಿ.ಪಿ.ಎಲ್ ಕುಟುಂಬದವರಿಗೆ ಎ.ಬಿ.ಆರ್.ಕೆ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ವಿಜಯಕುಮಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ, ಜಿಲ್ಲಾ ಅಂಧತ್ವ ಅಧಿಕಾರಿಗಳಾದ ಡಾ.ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮುದ್ದಣ್ಣ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ ಹಾಗೂ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.