ಪ್ರತಿ ತಾಲ್ಲೂಕಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಕ್ಕೆ ಪ್ರಸ್ತಾವ ಸಲ್ಲಿಸಿ

ಚಿತ್ರದುರ್ಗ, ಏ.30;  ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಆರಂಭ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಆಯೋಜಿಸಿದ್ದ ಕೋವಿಡ್-19 ರೋಗ ತಡೆ ಕಾರ್ಯಕ್ರಮಗಳು ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಬಾರದು. ಈ ಹಿನ್ನಲೆಯಲ್ಲಿ ತಾಲ್ಲೂಕುವಾರು ಆಕ್ಸಿಜನ್ ಉತ್ಪಾದನಾ ಘಟಕ ಆರಂಭ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವರು ತಾಕೀತು ಮಾಡಿದರು.
ರೆಮ್‍ಡಿಸಿವಿರ್ ಲಸಿಕೆ ಸರಬರಾಜು ವಿಚಾರದಲ್ಲಿ  ತೊಂದರೆ ಉಂಟಾಗುತ್ತಿದೆ. ಇದರಿಂದ ಎಲ್ಲ ಕಡೆಯೂ ದೂರುಗಳು ಬರುತ್ತಿವೆ. ರೆಮ್‍ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಈಗಾಗಲೇ ಜಿಲ್ಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದ್ದು, ಅಗತ್ಯ ಕ್ರಮವಹಿಸಬೇಕು ಎಂದರು.
   ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಸಮರ್ಪಕವಾಗಿ ಸೌಲಭ್ಯ ದೊರೆಯುವಂತಾಗಬೇಕು. ರೋಗಿಗಳು ಯಾವುದೇ ಕಾರಣಕ್ಕೂ ಆಕ್ಸಿಜನ್ ಇಲ್ಲ ಎಂಬ ಸಮಸ್ಯೆ ಹೇಳಬಾರದು. ಸರ್ಕಾರಿ ವೈದ್ಯರು ರೆಮ್‍ಡಿಸಿವಿರ್ ಲಸಿಕೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಾಕೀತು ಮಾಡಿದರು.
ಅನೇಕ ಜನರಿಗೆ ರೋಗ ಲಕ್ಷಣಗಳಿದ್ದರೂ ಆರ್‍ಟಿಪಿಸಿಆರ್ ಹಾಗೂ ರ್ಯಾಪಿಟ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬರುತ್ತಿದೆ. ಸಿಟಿ ಸ್ಕ್ಯಾನ್‍ನಲ್ಲಿ ಈ ಬಗ್ಗೆ ವರದಿಯಾಗಲಿದ್ದು ಇಂತಹ ರೋಗಿಗಳನ್ನು ಸಾರಿ, ಐಎಲ್‍ಐ ವಾರ್ಡ್‍ಗೆ ದಾಖಲಿಸಿ ಕೋವಿಡ್ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನು ಇವರಿಗೂ ನೀಡಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಸೌಜನ್ಯದಿಂದ ವರ್ತಿಸಬೇಕು. ಅವರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಿಇಒ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ  ಉಪಸ್ಥಿತರಿದ್ದರು.