ಕಲಬುರಗಿ,ಜು.27:ಪ್ರತಿ ಟನ್ ಕಬ್ಬಿಗೆ 5000ರೂ.ಗಳ ಬೆಂಬಲ ಬೆಲೆ ನಿಗದಿಪಡಿಸುವಂತೆ ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿ, 2022-2023ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್‍ಗೆ ಹತ್ತು ರೂ.ಗಳ ಬಾಕಿ ಹಣ ಶೀಘ್ರ ನೀಡುವಂತೆ, 2023-2024ನೇ ಸಾಲಿನಲ್ಲಿ ಟನ್ ಕಬ್ಬಿಗೆ ಕೇವಲ 1(ಒ) ರೂ.ಗಳ ಎಫ್‍ಆರ್‍ಪಿ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡನೀಯ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ಜಿಲ್ಲೆ ತೊಗರಿ ನಾಡು ಎಂಬ ಕೀರ್ತಿಗೆ ಪಾತ್ರವಾದಂತೆ ಇತ್ತೀಚೆಗೆ ಕಬ್ಬು ಬೆಳೆಗಾರರ ಕಬ್ಬಿನ ಮೇಲೆ ಅವಲಂಬಿತರಾದ ರೈತರ ಕಬ್ಬು ಎದಯುದ್ಧ ಸಾಲ ಎಂಬ ಅಪಕೀರ್ತಿಗೂ ಪಾತ್ರವಾಗಿದೆ. ಕೃಷಿ ಕಾಯಕ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ಕಣ್ಮರೆಯಾಗಿ ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ರೈತರ ಆತ್ಮಹತ್ಯೆಯು ನಿಂತಿಲ್ಲ. ಜೊತೆಗೆ ಕೃಷಿ ಮಾಡುವ ಯುವ ರೈತರಿಗೆ ಉತ್ತಮ ಜೀವನ ನಡೆಸುವ ಭರವಸೆ ಇಲ್ಲ ಎಂಬ ಕಾರಣಕ್ಕೆ ಯುವತಿಯರು ಮದುವೆಯಾಗಲು ಮುಂದೆ ಬರುತ್ತಿಲ್ಲ. ಹಾಗಾಗಿ ನಾವು ನಮ್ಮ ಬೆವರಿನ ಪಾಲನ್ನು ಬಂಡವಾಳಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.
ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರದ ಎರಡನೇ ಸ್ಥಾನದಲ್ಲಿ ಭಾರತ ಇದೆ. ಅದೇ ರೀತಿ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಸುಮಾರು 5 ಕೋಟಿ ಕಬ್ಬು ಬೆಳೆಗಾರರು ದೇಶದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದು ಟನ್ ಕಬ್ ಬೆಳೆಯಲು ಸುಮಾರು 3500ರೂ.ಗಳು ಖರ್ಚು ಬರುತಗತಿದೆ. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿಗದಿಪಡಿಸಿದರೆ ಟನ್‍ಗೆ 5000ರೂ.ಗಳಿಗೂ ಹೆಚ್ಚು ಬೆಲೆ ನೀಡಬೇಕು. ಆದಾಗ್ಯೂ, ಕೇಂದ್ರದ ನರೇಂದ್ರ ಮೋದಿ ಸರ್ಕಾರ 2023-2024ನೇ ಸಾಲಿಗೆ ಒಂದು ಕೆಜಿ ಕಬ್ಬಿಗೆ ಪೈಸೆ, ಕ್ವಿಂಟಲ್‍ಗೆ ಹತ್ತು ರೂ.ಗಳು, ಟನ್‍ಗೆ 100ರೂ.ಗಳು ಮಾತ್ರ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ರೈತ ಕುಲಕ್ಕೆ ಮಾಡಿದ ಅಪಮಾನ ಎಂದು ಅವರು ಟೀಕಿಸಿದರು.
ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಬಿತ್ತನೆ ಕಬ್ಬು, ಅಳಿನ ಕೂಲಿ, ಉಳುಮೆ ವೆಚ್ಚ ಸೇರಿದಂತೆ ಕಬ್ಬು ಬೆಳೆಯಲು ದುಬಾರಿ ಖರ್ಚು ಬರುತ್ತಿದೆ. ಗುಜರಾತ್‍ನಲ್ಲಿ ಟನ್ ಕಬ್ಬಿಗೆ 4400ರೂ.ಗಳು, ಪಂಜಾಬ್‍ನಲ್ಲಿ 3800ರೂ.ಗಳು, ಉತ್ತರ ಪ್ರದೇಶದಲ್ಲಿ 3500ರೂ.ಗಳು ಹಾಗೂ ಕರ್ನಾಟಕದ ರೇಣುಕಾ ಶುಗರ್ 3660ರೂ.ಗಳು ಸೇರಿದಂತೆ ಬೆಳಗಾವಿಯ ಹಲವು ಕಾರ್ಖಾನೆಗಳೇ 35ರೂ.ಗಳಿಗಿಂತ ಹೆಚ್ಚಾಗಿ ನೀಡುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಮಧ್ಯೆ ಪ್ರದೇಶ ಮಾಡಬೇಕು. ಸುಪ್ರಿಂಕೋರ್ಟ್‍ನ ಐವರು ನ್ಯಾಯಾಧೀಶರ ಪೀಠದ ಆದೇಶದಂತೆ ಎಸ್‍ಎಪಿ ನಿಗದಿಪಡಿಸಲು ಅವಕಾಶ ನೀಡಿದೆ. ಅದನ್ನು ಬಳಸಿಕೊಂಡು ರಾಜ್ಯ ಸರ್ಕಾರ ಟನ್ ಕಬ್ಬಿಗೆ 500ರೂ.ಗಳ ಹೆಚ್ಚುವರಿ ಮೊತ್ತ ಘೋಷಣೆ ಮಾಡಬೇಕು. ಹಾಗಾಗಿ ಒಟ್ಟಾರೆ ಟನ್ ಕಬ್ಬಿಗೆ 5000ರೂ.ಗಳ ಬೆಲೆ ನಿಗದಿಪಡಿಸುವಂತೆ ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ಅಧಿನಿಯಮ 2013 ಹಾಗೂ ತಿದ್ದುಪಡಿ ಅಧಿನಿಯಮ 2014ರ ಕಲಂ 4(ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದ ಎಥೆನಾಲ್ ಉತ್ಪಾದಿಸುವ ಮತ್ತು ಉತ್ಪಾದಿಸದೇ ಇರುವ ಎಲ್ಲ ಸಕ್ಕರೆ ಕಾರ್ಖಾನೆಗಳು 2022-2023ರ ಎಫ್‍ಆರ್‍ಪಿ ಜೊತೆಗೆ ಪ್ರತಿ ಟನ್‍ಗೆ ಹೆಚ್ಚುವರಿಯಾಗಿ ಪಾವತಿಸಲು ಆದೇಶಿಸಿದೆ. ಅದರಂತೆ ಚಾಮುಂಡೇಶ್ವರಿ ಸಕ್ಕರೆ ಕಂಪೆನಿಯು ರೈತರಿಗೆ ಸುಮಾರು ಹತ್ತೂವರೆ ಕೋಟಿ ರೂ.ಗಳ ಹಣವನ್ನು ನೀಡಬೇಕಾಗಿದೆ. ಕಬ್ಬು ಸರಬರಾಜು ಮಾಡಿ 2-3 ತಿಂಗಳಾದರೂ ಹಣ ನೀಡದೇ ವಿಳಂಬ ಮಾಡಿರುವ ಉದಾಹರಣೆಗಳುಂಟು. ಹಾಗಾಗಿ ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ವಿಳಂಬ ಮಾಡುತ್ತಿರುವ ಕಾರ್ಖಾನೆ ಆಡಳಿತ ಮಂಡಳಿ ಮೇಲೆ ಕಾನೂನು ಕ್ರಮ ಜರುಗಿಸಿ ಹಿಂದೆ ವಿಳಂಬವಾದ ಪಾವತಿಗೆ ನಿಯಮದ ಪ್ರಕಾರ ಶೇಕಡಾ 16ರಷ್ಟು ಬಡ್ಡಿಯನ್ನು ರೈತರಿಗೆ ನೀಡುವಂತೆ, ತೂಕದಲ್ಲಿ ಮತ್ತು ಸಕ್ಕರೆ ಇಳುವರಿಯಲ್ಲಿ ನ್ಯಾಯ ಸಮ್ಮತ ರೀಡಿಂಗ್ ಕಂಡುಬರುತ್ತಿಲ್ಲ ಎಂಬ ಗುಮಾನಿ ಇದೆ. ಹಾಗಾಗಿ ತಜ್ಞರ ತಂಡ ರಚಿಸುವಂತೆ ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಸಾಯಬಣ್ಣ ಗುಡುಬಾ, ದಿಲೀಪಕುಮಾರ್, ಸುಭಾಷ್ ಹೊಸಮನಿ, ರಾಯಪ್ಪ ಹುರಮುಂಜಿ, ಜಾವೇದ್ ಹುಸೇನ್, ಎಂ.ಬಿ. ಸಜ್ಜನ್ ಮುಂತಾದವರು ಪಾಲ್ಗೊಂಡಿದ್ದರು.