ಪ್ರತಿ ಗ್ರಾಮಪಂಚಾಯ್ತಿಗಳಲ್ಲಿ ಶಾಲಾ ಸಂಕೀರ್ಣ ನಿರ್ಮಾಣ

ಬೆಂಗಳೂರು, ನ. ೧- ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಎಲ್ಲ ಮೂಲ ಸೌಕರ್ಯ ಹೊಂದಿರುವ ಸುಸಜ್ಜಿತವಾದ ಶಾಲಾ ಸಂಕೀರ್ಣಗಳನ್ನು ನಿರ್ಮಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ಅಡಿಯಲ್ಲಿ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಮೂಲ ಸೌಕರ್ಯ ಹೊಂದಿರುವ ಶಾಲಾ ಸಂಕೀರ್ಣಗಳು ನಿರ್ಮಾಣವಾಗಲಿವೆ ಎಂದರು.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಅವಶ್ಯವಿದೆ. ಅದಕ್ಕೆ ಪೂರಕವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ರಾಜ್ಯದ ಸುಮಾರು ೨೨,೭೧೮ ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ ೧೪,೨೩೦ ಶಾಲೆಗಳಲ್ಲಿ ಶೇ. ೪೦ ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ೨೨,೭೧೦ ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ ೨೪೨೧ ಶಾಲೆಗಳಲ್ಲಿ ಶೇ. ೪೦ ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳು ಮತ್ತು ಕನ್ನಡ ಕಲಿಕೆ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.