ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ: ಜಿ. ಬಿ. ವಿನಯ್ ಕುಮಾರ್ ಭರವಸೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೪: ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಆದ್ರೆ, ಇಲ್ಲಿ ಐಟಿ-ಬಿಟಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದುವರೆಗೆ ಬಂದಿಲ್ಲ. ಇದಕ್ಕೆ ಇಷ್ಟು ದೀರ್ಘಕಾಲ ಆಡಳಿತ ನಡೆಸಿರುವವರಿಗೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಕೊರತೆಯೇ ಕಾರಣ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು ನಾನು. ನನಗೆ ರಾಜಕೀಯ ಹೊಸದು.  ನನ್ನ ತಂದೆ, ತಾಯಿ, ಸಂಬಂಧಿಕರು ಯಾರೂ ರಾಜಕಾರಣದಲ್ಲಿ ಶಾಸಕರಾಗಿಲ್ಲ, ಸಚಿವರೂ ಆಗಿಲ್ಲ. ಸಂಸದರಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಾಗ ರಾಜಕೀಯದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆ ಬಂತು. ಆಗ ಜನರ ಬಳಿಗೆ ಮತ್ತೆ ಹೋದೆ. ಮುಂದಿನ ನಡೆ ಬಗ್ಗೆ ಅವರಿಗೆ ಕೇಳಿದೆ. ಸ್ವಾಭಿಮಾನಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದೀರಾ.  ಚುನಾವಣೆಗೆ ಸ್ಪರ್ಧಿಸಿ. ನಾವು ಗೆಲ್ಲಿಸಿಕೊಂಡು ಬರುತ್ತೇವೆಂಬ ಭರವಸೆ ಕೊಟ್ಟ ಕಾರಣ ಸ್ಪರ್ಧೆ ಮಾಡಿದ್ದೇನೆ. ಎಲ್ಲರೂ ಬೆಂಬಲಿಸಿ ಗೆಲ್ಲಿಸುತ್ತೀರಾ ಎಂಬ ಭರವಸೆ ಇದೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಸಾಮಾನ್ಯ ಯುವಕನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.ನಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಬಳಿಕ ತುಂಬಾನೇ ಒತ್ತಡ ಬಂತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಗೆ ಬರುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ದೊಡ್ಡ ದೊಡ್ಡ ನಾಯಕರೇ ಬಂದಿದ್ದಾರೆ, ಬರುತ್ತಿದ್ದಾರೆ. ಆದ್ರೆ, ನನಗೆ ಜನರೇ ಸ್ಟಾರ್ ಪ್ರಚಾರಕರು. ಅವರು ಮನಸ್ಸು ಮಾಡಿದರೆ ನನ್ನ ಗೆಲುವು ಕಷ್ಟವಾಗದು ಎಂದರು.ಹಣಬಲ, ತೋಲ್ಭಲ ಇಲ್ಲದಿದ್ದರೂ ಜನ ಬಲ ನನ್ನಲ್ಲಿದೆ. ಹಣ, ಆಮೀಷಕ್ಕೆ ಬಲಿಯಾಗಿ ಮತ ಚಲಾಯಿಸದೇ ಸ್ವಾಭಿಮಾನಿಗಳಾಗಿ ಮತ ಹಾಕಿ. ನೀವು ಹಾಕುವ ಒಂದೊಂದು ಮತವೂ ದುರ್ಬಳಕೆ ಆಗಲ್ಲ. ಜನರ ಅಭಿವೃದ್ಧಿಗಾಗಿ ಬಳಕೆಯಾಗುತ್ತದೆ. ಮತ್ತೆ ನಿಮ್ಮ ಮನೆ ಬಾಗಿಲಿಗೆ ಸೇವೆ ಮಾಡಲು ಬರುತ್ತದೆ ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಹೈಟೆಕ್ ಶಾಲೆಗಳನ್ನು ಆರಂಭಿಸಿ ಮಕ್ಕಳು ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುತ್ತೇನೆ. ಐಎಎಸ್, ಐಪಿಎಸ್, ಕೆಎಎಸ್ ಅನ್ನು ಬಡವರ ಮಕ್ಕಳೂ ಮಾಡಿ ಉನ್ನತ ಹುದ್ದೆಗೆ ಹೋಗಬಹುದು ಎಂಬುದನ್ನು ಮಾಡಿ ತೋರಿಸುತ್ತೇನೆ. ದಾವಣಗೆರೆ ಜಿಲ್ಲೆಯಲ್ಲಿ ಎರಡು ಕುಟುಂಬಗಳಿಗೆ ಮಾತ್ರ ಅಧಿಕಾರ ಸಿಕ್ಕಿದೆ. ಇದನ್ನು ತೊಲಗಿಸಿ ಮೂರು ದಶಕಗಳ ಬಳಿಕ ಬೀಸುತ್ತಿರುವ ಬದಲಾವಣೆ ಗಾಳಿ ಸೃಷ್ಟಿಸಿದ್ದು ನೀವೇ. ಗೆಲ್ಲಿಸುವ ಜವಾಬ್ದಾರಿಯೂ ನಿಮ್ಮದೇ ಎಂದು ಕರೆ ನೀಡಿದರು.