ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಒತ್ತಾಯ

ಕೋಲಾರ, ಮೇ.೨೮: ಕರೋನಾ ೨ನೇ ಅಲೆ ಗ್ರಾಮೀಣ ಭಾಗದ ಜನರಲ್ಲಿ ಹೆಚ್ಚು ಆತಂಕ ಮೂಡಿಸಿದ್ದು, ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಸರ್ಕಾರದ ಮಾನದಂಡದಂತೆ ಎಲ್ಲರಿಗೂ ಲಸಿಕೆ ನೀಡಬೇಕು.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ದಾಖಲು ಮಾಡುವಂತೆ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಮಾ ಮಹದೇವನ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು
ಕಟ್ಟುನಿಟ್ಟಾಗಿ ಪಾಲಿಸಿ ಲಸಿಕೆ ಪಡೆದವರು ಸಹಾ ಕೋವಿಡ್ ಮುಂಜಾಗ್ರತಾ ಕ್ರಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಮಾಡುವ ಮೂಲಕ
ರೋಗದಿಂದ ಮುಕ್ತರಾಗಿ ಎಂದರು.ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರು ಕೋವಿಡ್ ನಿಯಮಾವಳಿಗಳನ್ನು ಪಾಲಿಸದೆ ಗ್ರಾಮಗಳಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ಅವರನ್ನು ಕೋವಿಡ್ ಕೇರ್‌ಸೆಂಟರ್‍ಗೆ ದಾಖಲು ಮಾಡಿ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಉತ್ತಮ ಆಹಾರ, ಚಿಕಿತ್ಸೆ, ಸ್ವಚ್ಚತೆ ಹಾಗೂ ಆರೋಗ್ಯಕರ ವಾತಾವರಣವನ್ನು ಕಲ್ಪಿಸಿದ್ದಲ್ಲಿ ಸೋಂಕಿತರು ಸ್ವಯಂ ಪ್ರೇರಿತರಾಗಿ ಬಂದು ದಾಖಲಾಗಲು ಅನುಕೂಲವಾಗುತ್ತದೆ. ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಕರೆಮಾಡಿ ಆಕ್ಸಿಜನ್ ಪ್ರಮಾಣ, ಪಲ್ಸ್, ದೇಹದ ಉಷ್ಣಾಂಶ, ನಿಯಮಿತವಾಗಿ ಔಷಧಿ
ತೆಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.ಆರೋಗ್ಯ ಇಲಾಖೆಯ ಮತ್ತು ಫ್ರಂಟ್ ಲೈನ್ ನೌಕಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ. ಪ್ರತಿ ಗ್ರಾಮದಲ್ಲೂ ಕೋವಿಡ್ ಟಾಸ್ಕ್ ಪೋರ್ಸ್ ರಚನೆ ಮಾಡಿ ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರಿಗೆ ವೈದ್ಯಕೀಯ ಕಿಟ್‌ನ್ನು ತಲುಪಿಸಲು ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಡಾ|| ಆರ್.ಸೆಲ್ವಮಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಹೆಚ್ಚಿಗೆ ಮಾಡಿ,
ಸೋಂಕಿತರಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಲಾಗುವುದು. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರನ್ನು ಗುರ್ತಿಸಿ, ಕೋವಿಡ್ ಪರೀಕ್ಷೆಯನ್ನು
ಮಾಡಿ ಹೋಂ ಐಸೋಲೇಷನ್‌ನಲ್ಲಿ ಇರುವಂತೆ ನೋಡಿಕೊಳ್ಳಲು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ ೩೬,೦೩೭ ಪ್ರಕರಣಗಳಿದ್ದು, ೨೮,೪೧೦ ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳು ೭,೨೫೫ ಇದ್ದು, ಅದರಲ್ಲಿ ಹೋಂ ಐಸೋಲೇಷನ್‌ನಲ್ಲಿ ೩,೮೮೯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಒಟ್ಟು ೩೬೯ ಜನ ಮರಣ ಹೊಂದಿರುತ್ತಾರೆ. ಜಿಲ್ಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಒಟ್ಟು ೧,೬೫೪
ಬೆಡ್‌ಗಳ ವ್ಯವಸ್ಥೆಯಿದ್ದು, ೬೧೨ ಬೆಡ್‌ಗಳಲ್ಲಿ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ೫,೨೯,೧೦೪ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ೩೬,೦೩೭ ಜನರಿಗೆ ಪಾಸಿಟಿವ್ ಬಂದಿದೆ ಎಂದು ವಿವರಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ ಹಾಗೂ ಜಿಲ್ಲಾ
ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.