
ಕೋಲಾರ,ಆ,೧೬-ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ “ನನ್ನ ನೆಲ-ನನ್ನ ದೇಶ” ಅಭಿಯಾನದಡಿ ಜಿಲ್ಲೆಯ ಎಲ್ಲಾ ೧೫೪ ಗ್ರಾಪಂಗಳಲ್ಲಿ ಭಾರತೀಯ ಸೇನೆಯಲ್ಲಿ ವೀರ ಮರಣವನ್ನಪ್ಪಿದ ಹಾಗೂ ಸೇವೆ ಸಲ್ಲಿಸಿದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಶಿಲಾ ಫಲಕಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಪಂ ಸಿಇಒ ಪದ್ಮಬಸವಂತಪ್ಪ ತಿಳಿಸಿದರು.
ತಾಲೂಕಿನ ಮದನಹಳ್ಳಿ ಕ್ರಾಸ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಹುತಾತ್ಮ ಯೋದ ರಾಜೇಶ್‌ರ ಪೋಷಕರಿಗೆ ಸನ್ಮಾನಿಸಿ ಮಾತನಾಡಿದರು.
ದೇಶಕ್ಕಾಗಿ ಪ್ರಾಣ ತೆತ್ತ ಪ್ರತಿ ಸೈನಿಕರ ಕುಟುಂಬಕ್ಕೆ ನಾವೆಲ್ಲರೂ ಋಣಿಯಾಗಿರಬೇಕು, ಪ್ರತಿ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನುತ್ತಾರೆ ಆದರೆ ಸೈನಿಕ ಆಗಬೇಕು ಎಂದು ಯಾರೂ ಹೇಳುವುದಿಲ್ಲ, ಆದರೆ ಸೈನಿಕನಾಗುವ ಅದೃಷ್ಟ ಯಾರಿಗೂ ಬರುವುದಿಲ್ಲ ಎಂದು ತಿಳಿಸಿದರು. ಮಾಜಿ ಸೈನಿಕರಾದ ಸಂತೋಷ್ ಹಾಗೂ ಎಂ.ಕೆ ನಾರಾಯಣಸ್ವಾಮಿ ಸೇನೆಯಲ್ಲಿ ತಾವು ಸೇವೆ ಸಲ್ಲಿಸುತ್ತಿದ್ದ ಸಮಯವನ್ನು ನೆನಪಿಸಿಕೊಂಡು ದೇಶ ಸೇವೆಯ ನೆನಪುಗಳನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಸಹಾಯಕ ಯೋಜನಾ ನಿರ್ದೇಶಕ ವೆಂಕಟಾಚಲಪತಿ, ಸಹಾಯಕ ಕಾರ್ಯದರ್ಶಿ ಶಶಿಕುಮಾರ್, ತಾಪಂ ಇಒ ಪಿ.ಮುನಿಯಪ್ಪ, ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ಗ್ರಾಪಂ ಪಿಡಿಒ ಅನುರಾಧ ಇದ್ದರು.