
ಸಂಜೆವಾಣಿ ವಾರ್ತೆ
ಸಂಡೂರು: ಮಾ: 10 ಹೆರಿಗೆಯಾಗುವುದರೊಳಗೆ ಪ್ರತಿ ಗರ್ಭಿಣಿಯು ಪ್ರಸೂತಿ ತಜ್ಞರಲ್ಲಿ ಪರೀಕ್ಷೆ ಮಾಡಿಸಲೇ ಬೇಕು ಎಂದು ಡಾ.ರಜಿಯಾ ಬೇಗಂ ಅಭಿಪ್ರಾಯಪಟ್ಟರು.
ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗಂಡಾಂತರ ಗರ್ಭಿಣಿಯರ ತಪಾಸಣೆ ನಡೆಯಿತು, ಶಿಬಿರ ಉದ್ದೇಶಿಸಿ ಪ್ರಸೂತಿ ತಜ್ಞೆ ಡಾ.ರಜಿಯಾ ಬೇಗಂ ಅವರು ಗರ್ಭಿಣಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಮಹತ್ವವನ್ನು ಅರಿತುಕೊಳ್ಳಬೇಕು, ಗರ್ಭಿಣಿ ತಪಾಸಣೆ ಪ್ರತಿ ತಿಂಗಳು ಮಾಡಿಸಲೇ ಬೇಕು, ಕನಿಷ್ಠ ಒಮ್ಮೆಯಾದರೂ ಪ್ರಸೂತಿ ತಜ್ಞರು ಪರೀಕ್ಷೆ ಮಾಡಿಸುವುದು ಉತ್ತಮ, ಭ್ರೂಣ ಬೆಳೆವಣಿಗೆಯ ಸ್ಥಿತಿಯನ್ನು ಪರೀಕ್ಷೆ ಮಾಡಿ ಸೂಕ್ತ ಸಲಹೆ ನೀಡುವರು, ಹೆರಿಗೆ ಸಾಂಸ್ಥಿಕವಾಗಿ ಆಗಬೇಕು,ಹೆರಿಗೆ ನಂತರ ಎದೆ ಹಾಲುಣಿಸುವುದು, ಶಿಶು ರಕ್ಷಣೆ, ಪೌಷ್ಟಿಕಾಹಾರ ಸೇವನೆ, ವಿಶ್ರಾಂತಿ, ಶಿಶುಗಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು,
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯಾ ಅವರು ಮಾತನಾಡಿ ಹಳ್ಳಿಗಳಲ್ಲಿರುವ ತೊಡಕಿನ ಗರ್ಭಿಣಿ ಮಹಿಳೆಯರನ್ನು ಪ್ರತಿ ತಿಂಗಳು ಒಂಬತ್ತನೇ ದಿನಾಂಕದಂದು ಕರೆ ತರುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು, ನಮ್ಮ ಕೇಂದ್ರಕ್ಕೆ ಬರುವ ಗರ್ಭಿಣಿಯರ ಸಂಖ್ಯೆ ಅಧಿಕ ಇರುವ ಕಾರಣ ಪ್ರತಿ ತಿಂಗಳು 25 ರಂದು ವಿಶೇಷವಾಗಿ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಅದರಂತೆ ಕರೆದುಕೊಂಡು ಬನ್ನಿ, ಅವಶ್ಯಕತೆ ಇದ್ದಾಗ ಆಂಬ್ಯಲೆನ್ಸ್ ಸೇವೆ ಪಡೆದು ಕೊಳ್ಳುವಂತೆ ಸಲಹೆ ನೀಡಿದರು,
ಕಾರ್ಯಕ್ರಮ ಪರಿಶೀಲನೆಗೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಅನಿಲ್ ಕುಮಾರ್, ಮತ್ತು ಸಂಡೂರು ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಭೇಟಿ ನೀಡಿ ಪರಿಶೀಲನೆ ಮಾಡಿ, ಸಮಾಧಾನಕರವಾಗಿದೆ ಇನ್ನಷ್ಟು ಸುಧಾರಣೆ ಮಾಡಿ ಎಂದು ಸೂಚಿಸಿದರು,
ಈ ಸಂದರ್ಭದಲ್ಲಿ ಡಾ.ಪ್ರಿಯಾಂಕಾ, ಶುಶ್ರೂಷಕರಾದ ಮಾಲಾ, ಕಾರ್ಯಕರ್ತೆಯರಾದ ಬಸಮ್ಮ, ಎರ್ರಮ್ಮ, ಸುಶೀಲಮ್ಮ,ಸವಿತಾ, ಸುಮಂಗಳ,ಮಾಳಮ್ಮ,ಲಕ್ಷ್ಮಿ,ಹನುಮಮತಮ್ಮ ಇತರರು ಉಪಸ್ಥಿತರಿದ್ದರು