ಪ್ರತಿ ಗಂಟೆಗೆ 1,900 ಬಾಡಿಗೆ- ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ಭತ್ತ ಕಟಾವು ಯಂತ್ರದ ಬೆಲೆ ನಿಗದಿ

ಗಂಗಾವತಿ, ನ,06: ತಾಲೂಕಿನಲ್ಲಿ ಭತ್ತ ಕಟಾವು ಆರಂಭವಾಗಿದ್ದು, ಭತ್ತ ಕಟಾವು ಯಂತ್ರಗಳ ಬಾಡಿಗೆ ಪ್ರತಿ ಗಂಟೆಗೆ 1,900 ರೂ.ದರ ನಿಗದಿ ಪಡೆಸಲಾಗಿದೆ ಎಂದು ತಹಸೀಲ್ದಾರ್ ಎಂ.ರೇಣುಕಾ ಹೇಳಿದರು.
ನಗರದ ತಹಸೀಲ್ ಕಚೇರಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಭತ್ತ ಕಟಾವು ಯಂತ್ರ ಮಾಲೀಕರು ಹಾಗೂ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಚನ್ನಪ್ಪ ಮಳಗಿ, ಪ್ರಗತಿಪರ ರೈತ ಜೋಗದ ನಾರಾಯಣಪ್ಪ ಮಾತನಾಡಿ, ಈ ವರ್ಷ ಭತ್ತದ ಇಳುವರಿ ತೀರ ಕಡಿಮೆಯಾಗಿದ್ದು, 1200 ದರ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.
ರೈತ ಚೆನ್ನಗೌಡ ಹೇರೂರು ಮಾತನಾಡಿ, ಪ್ರತಿ ಗಂಟೆಗೆ 1,500 ರೂ. ದರ ನಿಗದಿಪಡೆಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ ಮಾತನಾಡಿ, ಬಳ್ಳಾರಿಯಲ್ಲಿ ಪ್ರತಿಗಂಟೆಗೆ 2 ಸಾವಿರ ಮತ್ತು ದಾವಣಗೆರೆಯಲ್ಲಿ 1,800 ದರ ನಿಗದಿ ಪಡೆಸಲಾಗಿದೆ. ಈ ಭಾಗದ ರೈತರು ಹಾಗೂ ಯಂತ್ರದ ಮಾಲೀಕರಿಗೆ ತೊಂದರೆಯಾಗದಂತೆ ಪ್ರತಿಗಂಟೆಗೆ 1,900 ದರ ನಿಗದಿಪಡಿಸಲಾಗಿದೆ ಎಂದರು.
ಭತ್ತ ಯಂತ್ರ ಕಟಾವು ಮಾಲೀಕರಾದ ಸತ್ಯನಾರಾಯಣ, ಸಿದ್ದಯ್ಯ ಸ್ವಾಮಿ, ಮಹಿಬೂಬು ಹಾಗೂ ರೈತರು, ಅಧಿಕಾರಿಗಳು ಇದ್ದರು.


ಕೋವಿಡ್-19 ಸಮಸ್ಯೆ ಇರುವುದರಿಂದ ಅನ್ನದಾತರಿಗೆ ಅನುಕೂಲ ಮಾಡಿಕೊಡಲು ಭತ್ತ ಕಟಾವಿಗೆ ಪ್ರತಿ ಗಂಟೆಗೆ 1,900 ದರ ನಿಗದಿಪಡಿಸಿದೆ. ತಾಲೂಕು ಆಡಳಿತದ ಆದೇಶ ಉಲ್ಲಂಘಿಸಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಯಂತ್ರ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು.

  • ಎಂ.ರೇಣುಕಾ, ತಹಸೀಲ್ದಾರ್


ಸರ್ಕಾರ ಭತ್ತ ಖರೀದಿ ಕೇಂದ್ರ ತಕ್ಷಣ ಆರಂಭಿಸಬೇಕು. ಮಾರುಕಟ್ಟೆಯಲ್ಲಿ ನೆಲ್ಲು ದರ ಕುಸಿದಿದ್ದು, ಬೆಂಬಲಯಡಿ ಭತ್ತ ಖರೀದಿ ಮಾಡಬೇಕು.

ಜೆ.ಹನುಮಂತಪ್ಪ, ರೈತ