ಪ್ರತಿ ಕೆಜಿ ಟೊಮೆಟೊ 80 ರೂ. ಮಾರಾಟಕ್ಕೆ ಕೇಂದ್ರ ನಿರ್ಧಾರ

ನವದೆಹಲಿ,ಜು.೧೬:ಟೊಮೆಟೊ ದರ ಅತ್ಯಂತ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಪ್ರತಿದಿನ ಕತ್ತರಿ ಬೀಳುತ್ತಿದೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರಸರ್ಕಾರ, ಇಂದಿನಿಂದ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟಕ್ಕೆ ಮುಂದಾಗಿದೆ. ಪ್ರತಿ ಕೆಜಿ ಟೊಮೆಟೊವನ್ನು ೮೦ ರೂ.ನಂತೆ ಮಾರಾಟ ಮಾಡಲು ನಿರ್ಧರಿಸಿದೆ.
ದೆಹಲಿಯಲ್ಲಿ ಎನ್‌ಸಿಆರ್ ಮೊಬೈಲ್ ವ್ಯಾನ್‌ಗಳ ಮುಖಾಂತರ ಟೊಮೆಟೊವನ್ನು ಪ್ರತಿ ಕೆಜಿಗೆ ೯೦ ರೂ. ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗ ಇಂದಿನಿಂದ ಪ್ರತಿ ಕೆಜಿ ೮೦ ರೂ.ಗೆ ಟೊಮೆಟೊ ಮಾರಾಟ ಮಾಡಲು ಮುಂದಾಗಿದೆ ಎಂದು ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ದೇಶದ ೫೦೦ಕ್ಕೂ ಹೆಚ್ಚು ಕಡೆಗಳಲ್ಲಿ ಬೆಲೆ ಏರಿಕೆ ಪರಿಸ್ಥಿತಿ ಮರುಮೌಲ್ಯಮಾಪನ ನಡೆಸಿ ಪ್ರತಿ ಕೆಜಿಗೆ ೮೦ರೂ.ನಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ.
ಸಹಕಾರ ಕ್ಷೇತ್ರದ ನಾಫೆಡ್, ಎನ್‌ಸಿಸಿಎಫ್ ಮುಖೇನ ಕಾನ್ಪುರ, ವಾರಾಣಸಿ, ಪಾಟ್ನಾ, ದೆಹಲಿ, ನೋಯ್ಡಾ, ಮುಜಾಫರ್‌ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಾರಾಟ ಪ್ರಾರಂಭವಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಗಳನ್ನವಂಬಿಸಿ ನಾಳೆಯಿಂದ ಇನ್ನೂ ಹೆಚ್ಚಿನ ನಗರಗಳಿಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡಲು ತೀರ್ಮಾನಿಸಿದೆ.
ದೇಶದ ಹಲವು ಭಾಗಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಹೀಗಾಗಿ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಮಾರುಕಟ್ಟೆಗಳಿಂದ ಟೊಮೆಟೊ ಖರೀದಿ ಮಾಡಲಾಗುತ್ತಿದೆ. ದೇಶದ ಹಲವೆಡೆ ಪ್ರತಿ ಕೆಜಿ ಟೊಮೆಟೊ ದರ ೨೦೦ ರೂ.ಗಿಂತ ಹೆಚ್ಚು ದುಬಾರಿಯಾಗಿದೆ. ಇದರಿಂದಾಗಿ ಟೊಮೆಟೊ ಬೆಳೆಗಾರರಿಗೆ ಬಂಪರ್ ಆದಾಯ ಬರುತ್ತಿದೆ.