ಪ್ರತಿ ಕಲೆಗೂ ಗುರಿ-ಧ್ಯೇಯೋದ್ಧೇಶ ಇದೆ

ತುಮಕೂರು, ಜು. ೨೮- ದೇಶದಲ್ಲಿ ಪ್ರತಿ ಕಲೆಗೂ ಅದರದ್ದೇ ಆದ ಗುರಿ, ಧ್ಯೇಯೋದ್ದೇಶಗಳಿವೆ. ತನ್ನ ತನವನ್ನು ಪ್ರತಿಪಾದಿಸುವ ಶಕ್ತಿಯೂ ಇದೆ ಎಂದು ಸಂಸ್ಕಾರ ಭಾರತೀ ಸಂಘಟನೆ ಪ್ರಾಂತ ಸಂಘಟಕ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಗಮಕ ಚಾರಿಟಬಲ್ ಟ್ರಸ್ಟ್, ಸಂಸ್ಕಾರ ಭಾರತೀ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗಮಕ ಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತೀ ಜಿಲ್ಲಾ ಘಟಕದ ಅಧ್ಯಕ್ಷ ನಟರಾಜ ಶ್ರೇಷ್ಠಿ ಮಾತನಾಡಿ, ಸಂಸ್ಕಾರ ಭಾರತೀ ಸಂಘಟನೆ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಇದರಲ್ಲಿ ತಮ್ಮನ್ನು ತಾವು ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳಲು ಸಾಧ್ಯವೆಂದು ಮನದಟ್ಟು ಮಾಡಿಕೊಟ್ಟರು.
ಗಮಕ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅನಂತರಾಮಯ್ಯ, ನಮ್ಮ ಗುರುಗಳಾದ ತುಂಕೂರು ಸುನಂದಾ ಅವರ ಮಾರ್ಗದರ್ಶನದಿಂದ ಗಮಕ ಹಬ್ಬವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.
ದ್ರೌಪದಿ ಅಕ್ಷಯಾಂಬರ ಎಂಬ ಕಾವ್ಯ ಭಾಗವನ್ನು ಎಚ್.ಪಿ. ಸಾವಿತ್ರಿ, ಅದಿತಿ ರಮೇಶ್, ಡಾ. ರಾಮಕೃಷ್ಣ ಭಟ್ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಮಧುಗಿರಿಯ ಗಾಯತ್ರಿ ನಾರಾಯಣ್, ಜನಪದ ಕಲಾವಿದ ಗಂಗರಾಜು ಅವರನ್ನು ಸನ್ಮಾನಿಸಲಾಯಿತು.