ಪ್ರತಿ ಅನ್ನದಾತನು ಸತ್ಯಾಗ್ರಹಿ: ರಾಹುಲ್

ನವದೆಹಲಿ,ಜ.೩- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು
ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ರೈತನು ಸತ್ಯಾಗ್ರಹಿಯೇ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ರೈತರಿಗೆ ಅವರ ಹಕ್ಕುಗಳು ವಾಪಸ್ ಸಿಗಲಿವೆ. ದೇಶದಲ್ಲಿ ಈಗ ಚಂಪಾರಣ್ ಸತ್ಯಾಗ್ರಹ ಮಾದರಿ ಹೋರಾಟ ನಡೆದಿದೆ. ಅಂದು ಬ್ರಿಟೀಷರು ಕಂಪನಿಗಳಿಗೆ ಬೆನ್ನೆಲುಬಾಗಿದ್ದರು. ಈಗ ಪ್ರಧಾನಿ ಮೋದಿ ಮತ್ತು ಸ್ನೇಹಿತರು ಕಂಪನಿ ಬಹದ್ದೂರ್‌ಗಳಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
೧೯೧೭ರಲ್ಲಿ ನಡೆದಿದ್ದ ಚಂಪಾರಣ್ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ್ದಾಗಿದ್ದು, ಇದರ ನೇತೃತ್ವವನ್ನು ರಾಷ್ಟ್ರಪಿತ ಮಹಾತ್ಮಗಾಂಧಿ ವಹಿಸಿದ್ದರು.
ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟ ಬಿಹಾರ ರಾಜ್ಯದ ಚಂಪಾರಣ್‌ನಲ್ಲಿ ಆರಂಭವಾಗಿತ್ತು. ಈಗ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನಕೃಷಿ ತಿದ್ದುಪಡಿಯ ಕಾಯ್ದೆಗಳನ್ನು ರದ್ದುಪಡಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಕೊರೆವ ಚಳಿಯನ್ನು ಲೆಕ್ಕಿಸದೆ ಸಿಂಘು ಗಡಿಯಲ್ಲಿ ಕಳೆದ ೪೦ ದಿನಗಳಿಂದಲೂ ರೈತರು ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದು, ಪ್ರತಿಭಟನೆ ನಡೆಸುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಗ್ರಾಸವಾಗಿದೆ.