ಪ್ರತಿಸಮುದಾಯಕ್ಕೆ ನಿಗಮ ಸ್ಥಾಪನೆ ಕೂಗು -ಬಿಎಸ್‌ವೈಗೆ ಇಕ್ಕಟ್ಟು

ಬೆಂಗಳೂರು, ನ. ೧೮- ರಾಜ್ಯದಲ್ಲಿ ಮರಾಠಿಗರ ಆಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು ಈಗ ಪ್ರತಿ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಗಳು ಕೇಳಿ ಬರುತ್ತಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗೆ ಮುನ್ನವೇ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದ ಮುಖ್ಯಮಂತ್ರಿಗಳು, ಈಗ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದಕ್ಕೆ ೫೦ ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕೆ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ.
ಈ ಆದೇಶ ವಾಪಸ್ ಪಡೆಯಲು ಈ ತಿಂಗಳ ೨೭ರವರೆಗೆ ಗಡುವು ನೀಡಲಾಗಿದ್ದು, ಇಲ್ಲದಿದ್ದರೆ ಡಿಸೆಂಬರ್ ೫ ರಂದು ರಾಜ್ಯ ಬಂದ್‌ಗೆ ಕರೆ ನೀಡಿರುವುದಾಗಿ ಕನ್ನಡ ಪರ ಸಂಘಟನೆಗಳುಎಚ್ಚರಿಕೆ ನೀಡಿವೆ.
ಈ ವಿವಾದದ ನಡುವೆ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ. ಇದು ಕೂಡ ಒಂದು ಸಮುದಾಯವನ್ನು ಓಲೈಸಲು ಸರ್ಕಾರ ಮುಂದಾಗಿರುವುದು ವ್ಯಾಪಕಟೀಕೆಗೆ ಗುರಿಯಾಗಿದೆ.
ಕೇವಲ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸದೆ ಎಲ್ಲಾ ಜಾತಿಗಳು ಸೇರಿದಂತೆ ಎಲ್ಲಾ ಸಮುದಾಯಕ್ಕೂ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಬೇಕೆಂಬ ಆಗ್ರಹ ಕೇಳಿ ಬಂದಿವೆ.
ಮತ್ತೊಂದೆಡೆ ವೀರಶೈವ ಮತ್ತು ಲಿಂಗಾಯಿತ ಸಮುದಾಯದಲ್ಲೇ ಬಿಕ್ಕಟ್ಟು ತಲೆದೋರಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಬೆನ್ನಲ್ಲೇ ಸಾಣೆಹಳ್ಳಿ ಡಾ. ಪಂಡಿತರಾಧ್ಯ ಶಿವಚಾರ್ಯ ಸ್ವಾಮೀಜಿ ನೀಡಿರುವ ಹೇಳಿಕೆನೀಡಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ಲಿಂಗಾಯಿತ ಮತ್ತು ವೀರಶೈವರ ನಡುವೆ ಜಗಳವಿದ್ದು, ಈ ಹೆಸರನ್ನು ಬದಲಾಯಿಸಬೇಕು. ನಿಗಮಗಳು ಚುನಾವಣೆ ಅಸ್ತ್ರವಾಗಬಾರದು.
ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿಂದುಳಿದ ಜನರಿಗೆ ನಿಗಮಗಳ ಸ್ಥಾಪನೆ ಅಗತ್ಯವಿದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಚುನಾವಣೆ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಸಿಲು ಆದೇಶ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಲಿಂಗಾಯಿತ ವೀರಶೈವ ಸಮುದಾಯದಲ್ಲಿ ಒಡಕಿ ರುವುದು ಎಲ್ಲರಿಗೂ ಗೊತ್ತಿದೆ. ದೇವರಾಜ್ ಅರಸು, ಅಂಬೇಡ್ಕರ್, ಬಾಬು ಜಗಜೀವನರಾಂ ಅಭಿವೃದ್ಧಿಗಳ ಮಾದರಿಯಲ್ಲೆ ಬಸವೇಶ್ವರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.
ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಚಾರ್ಯ ಸ್ಮಾಮೀಜಿ ನೀಡಿರುವ ಈ ಹೇಳಿಕೆ ಲಿಂಗಾಯಿತ ವೀರಶೈವ ಸಮುದಾಯದವರಲ್ಲೇ ಒಡಕಿಗೆ ಎಡೆ ಮಾಡಿಕೊಟ್ಟಿದೆ.