ಪ್ರತಿಷ್ಠೆಯ ಕಣವಾದ ಮೈಮುಲ್ ಚುನಾವಣೆ

ಮೈಸೂರು,ಮಾ.16:- ಮೈಸೂರಿನಲ್ಲಿಂದು ಮತ್ತೊಂದು ಲೋಕಲ್ ವಾರ್ ನಡೆಯುತ್ತಿದ್ದು ಮೈಮುಲ್ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ವರ್ಸಸ್ ಜೆಡಿಎಸ್ ನಡುವೆ ಫೈಟ್ ನಡೆದಿತ್ತು. ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್ ವರ್ಸಸ್ ಜೆಡಿಎಸ್ ನಡುವೆಯೇ ಫೈಟ್ ನಡೆದಿದೆ. ಮೈಮುಲ್ ಚುನಾವಣೆ ಇಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. 4 ಗಂಟೆಯ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ. ಮಾಜಿ ಸಿಎಂ ಹಾಗೂ ಮಾಜಿ ಸಚಿವರ ಪ್ರತಿಷ್ಠೆಗೆ ಕಾರಣವಾದ ಮೈಮುಲ್ ಚುನಾವಣೆಗೆ ಮೈಸೂರಿನ ಮೆಗಾಡೈರಿ ಆವರಣದಲ್ಲಿ ಮತದಾನ ನಡೆಯುತ್ತಿದೆ. ಜೆಡಿಎಸ್‍ನಲ್ಲೆ ಎರಡು ಬಣವಾಗಿ ಚುನಾವಣೆಗೆ ಸ್ಪರ್ಧೆ ನಡೆದಿದ್ದು,ಒಂದು ಮಾಜಿ ಸಿಎಂ ಕುಮಾರಸ್ವಾಮಿ ಬಣ. ಇನ್ನೊಂದು ಶಾಸಕ ಜಿ.ಟಿ.ದೇವೇಗೌಡ ಬಣದ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇದೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ನೇರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಿದ್ದಾರೆ. ಜಿ.ಟಿ.ದೇವೇಗೌಡ ವಿರುದ್ಧ ನಮ್ಮ ತಂಡದ ಸ್ಪರ್ಧೆ ಎಂದು ಬಹಿರಂಗವಾಗಿ ಘೋಷಣೆ ಕೂಡ ಮಾಡಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಕಾರ್ಯಕರ್ತರ ವಿರುದ್ಧವೇ ಮಾಜಿ ಸಿಎಂ ಹೆಚ್‍ಡಿಕುಮಾರಸ್ವಾಮಿಯವರು ಪ್ರಚಾರ ಮಾಡಿದ್ದಾರೆ. ಇತ್ತ ಹೆಚ್‍ಡಿ ಕುಮಾರಸ್ವಾಮಿಯವರ ವಿರುದ್ದವೇ ಶಾಸಕ ಜಿ.ಟಿ.ದೇವೇಗೌಡರು ತೊಡೆತಟ್ಟಿ ನಿಂತಿದ್ದಾರೆ. ಸಹಕಾರಿ ಕ್ಷೇತ್ರದ ಗದ್ದುಗೆಗಾಗಿ ದಳಪತಿಗಳ ನಡುವೆಯೇ ಹೋರಾಟ ನಡೆದಿದೆ. ಸೊಸೈಟಿ ಚುನಾವಣೆಗಾಗಿ ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡರು ಸ್ವಂತ ಪ್ರತಿಷ್ಠೆಯನ್ನೆ ಪಣಕ್ಕಿಟ್ಟಿದ್ದಾರೆ.
ಒಟ್ಟು 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 15 ಸ್ಥಾನಗಳಿಗೆ ಜಿ.ಟಿ.ದೇವೇಗೌಡರ ಬಣ ಸ್ಪರ್ಧಿಸಿದೆ. 13 ಸ್ಥಾನಗಳಿಗೆ ಹೆಚ್‍ಡಿ ಕುಮಾರಸ್ವಾಮಿಯವರ ಬಣ ಸ್ಪರ್ಧಿಸಿದೆ. ಮೈಸೂರು ಉಪವಿಭಾಗ ಹಾಗೂ ಹುಣಸೂರು ಉಪವಿಭಾಗಗಳಿಗೆ ಚುನಾವಣೆ ನಡೆಯುತ್ತಿದ್ದು, ಮೈಸೂರು ಉಪವಿಭಾಗದಲ್ಲಿ ಒಟ್ಟು 436 ಮತದಾರರಿದ್ದಾರೆ. ಹುಣಸೂರು ಉಪವಿಭಾಗದಲ್ಲಿ ಒಟ್ಟು 638 ಮತದಾರರಿದ್ದಾರೆ. ಎರಡು ವಿಭಾಗಗಳಿಂದ ಒಟ್ಟು 1074 ಮತದಾರರಿಂದ ಹಕ್ಕು ಚಲಾವಣೆಗೆ ಅವಕಾಶವಿದೆ. ಮೈಸೂರು ಉಪವಿಭಾಗಗಕ್ಕೆ 7 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಬೇಕು. ಹುಣಸೂರು ಉಪವಿಭಾಗಗಕ್ಕೆ 8 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಬೇಕು. ಓರ್ವ ಮತದಾರ 7 ನಿರ್ದೇಶಕರಿಗೆ ಮತಚಲಾಯಿಸಬಹುದು.