ಪ್ರತಿಷ್ಠೆಗಾಗಿ ಶಾಲೆಗಳ ಆರಂಭ ಸುರೇಶ್ ನಿರಾಕರಣೆ

ಬೆಂಗಳೂರು, ಡಿ. ೨೪- ಶಾಲೆ ಆರಂಭದ ವಿಚಾರದಲ್ಲಿ ತಾವು ಹಠ ಹಿಡಿದಿದ್ದೇನೆ, ಪ್ರತಿಷ್ಠೆಗೆ ಬಿದ್ದಿದ್ದೇನೆ. ತಮ್ಮ ಹಾಗೂ ಆರೋಗ್ಯ ಸಚಿವ ಸುಧಾಕರ್ ನಡುವೆ ಸಮನ್ವಯತೆ ಇಲ್ಲ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಶಿಕ್ಷಣ ಸಚಿವ ಸುರೇಶ್‌ಕುಮಾರ್, ಶಾಲೆ ಆರಂಭಿಸುವ ಬಗ್ಗೆ ತಾವು ಹಠ ಹಿಡಿದಿಲ್ಲ. ಶಾಲೆ ಆರಂಭಿಸುವುದು ಸರ್ಕಾರದ ಪ್ರತಿಷ್ಠೆ ವಿಚಾರವಲ್ಲ. ಮಕ್ಕಳ ವಿದ್ಯಾಭ್ಯಾಸದ ದೃಷ್ಠಿಯಿಂದ ಶಾಲೆ ಆರಂಭಿಸಲು ಕೈಗೊಳ್ಳಲಾದ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
ಶಾಲೆ ಆರಂಭ ಸಂಬಂಧ ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಂತರ ಆರೋಗ್ಯ ಸಚಿವ ಸುಧಾಕರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪರಸ್ಪರ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದರು.
ಪ್ರತಿಯೊಂದು ಹಂತದಲ್ಲೂ ಆರೋಗ್ಯ ಇಲಾಖೆ, ಸಚಿವ ಸುಧಾಕರ್ ಅವರ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇಲೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಹೇಗೆ ಸಮಾಜಕ್ಕೆ ಅತ್ಯುತ್ತಮವೋ ಹಾಗೆಯೆ ನಾವು ಕೂಡಾ ಸಮನ್ವಯತೆಯಿಂದ, ಹೊಂದಾಣಿಕೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ ಎಂದರು.
ಬೆಂಗಳೂರಿನಲ್ಲಿ ಕುಳಿತು ಶಾಲೆಗಳ ಆರಂಭದ ಬಗ್ಗೆ ನಿರ್ಧಾರ ಮಾಡಿಲ್ಲ. ಬೆಂಗಳೂರನ್ನು ಕೇಂದ್ರವನ್ನಾಗಿಸಿ ವರದಿಗಳನ್ನು ಪ್ರಸಾರ ಮಾಡುವುದು ಸರಿಯಲ್ಲ. ಶಿಕ್ಷಣ ಮತ್ತು ಆರೋಗ್ಯ ಸಚಿವರ ನಡುವೆ ಜಂಗಿಕುಸ್ತಿ ಮತ್ತಿತರ ಪದಗಳ ಬಳಕೆಯೂ ತಕ್ಕದ್ದಲ್ಲ ಎಂದು ಅವರು ಹೇಳಿದರು.
ಬೆಂಗಳೂರನ್ನು ಕೇಂದ್ರವನ್ನಾಗಿಟ್ಟುಕೊಂಡು ಶಾಲೆಗಳ ಆರಂಭದ ಬಗ್ಗೆ ಮಾತನಾಡುವುದು ಸರಿಯಲ್ಲ. ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ನೋಡಿಕೊಂಡು ಮಾತನಾಡಬೇಕು. ಶಾಲೆಗಳ ಆರಂಭವಾಗದೆ ಗ್ರಾಮೀಣ ಭಾಗದಲ್ಲಿ ಮಕ್ಕಳು ಬಾಲ್ಯ ವಿವಾಹ, ಬಾಲ ಕಾರ್ಮಿಕರು ಆಗುತ್ತಿದ್ದಾರೆ. ಇದನ್ನು ತಪ್ಪಿಸಲು ನಾವು ಶಾಲೆ ಆರಂಭದ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.
ಶಾಲೆ ಆರಂಭಿಸಲೇಬೇಕು ಎಂದು ನಾನೇನು ಹಠ ಹಿಡಿದಿಲ್ಲ. ಪರಿಸ್ಥಿತಿ ನನಗೂ ಗೊತ್ತಿದೆ. ಗ್ರಾಮೀಣ ಭಾಗದ ಮಕ್ಕಳ ಹಿತದೃಷ್ಠಿಯಿಂದ ತೀರ್ಮಾನ ಮಾಡಿದ್ದೇವೆ. ಬೆಂಗಳೂರನ್ನು ಮಾತ್ರ ಗಮನಿಸಿ ಮಾಧ್ಯಮಗಳು ವರದಿ ಪ್ರಸಾರ ಮಾಡುವುದು ಸರಿಯಲ್ಲ ಎಂದರು.
ಇತ್ತೀಚೆಗೆ ನ್ಯಾಯಾಲಯವು ಸಹ ಕೊರೊನಾ ಇಲ್ಲದ ಹಳ್ಳಿಗಳಲ್ಲಿ ಶಾಲೆ ಆರಂಭಿಸಿ ಎಂದು ಸೂಚನೆ ನೀಡಿದೆ. ಇದನ್ನೆಲ್ಲ ಮಾಧ್ಯಮಗಳು ಗಮನಿಸಬೇಕು. ಸುಖಾ ಸುಮ್ಮನೆ ಏನೇನೋ ವರದಿಗಳನ್ನು ಪ್ರಸಾರ ಮಾಡುವುದು ಸರಿ ಹೋಗಲ್ಲ ಎಂದರು.